7:23 PM Wednesday 22 - October 2025

ಹೃದಯಾಘಾತ ಎಂದು ಕಥೆ ಕಟ್ಟಿ ಪತಿಯ ಹತ್ಯೆ ಮಾಡಿದ ಪತ್ನಿ!

shruti
05/07/2025

ಬೆಂಗಳೂರು: ಪತಿಯನ್ನು ಹತ್ಯೆ ಮಾಡಿ ಹೃದಯಾಘಾತ ಎಂದು ನಂಬಿಸಿದ್ದ ಮಹಿಳೆಯನ್ನು ಸುದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿರುವ ಘಟನೆ ಶುಕ್ರವಾರ ನಡೆದಿದೆ.

ಭವಾನಿ ನಗರದ ನಿವಾಸಿ ಭಾಸ್ಕರ್ (41) ಹತ್ಯೆಗೀಡಾದ ವ್ಯಕ್ತಿಯಾಗಿದ್ದಾನೆ. ಈತನ ಪತ್ನಿ ಶ್ರುತಿಯನ್ನು ಪೊಲೀಸರು ಕೊಲೆ ಆರೋಪದಲ್ಲಿ ಬಂಧಿಸಿದ್ದಾರೆ.

ಹನ್ನೆರಡು ವರ್ಷಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಶೃತಿ ಜೊತೆ ಖಾಸಗಿ ಉದ್ಯೋಗಿ ಭಾಸ್ಕರ್ ಎರಡನೇ ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಭಾಸ್ಕರ್ ಸ್ತ್ರೀಲೋಲನಾಗಿದ್ದು, ಮಹಿಳೆಯರ ಜೊತೆಗೆ ಸ್ನೇಹ ಮೋಜು ಮಸ್ತಿ ಮಾಡುವ ಖಯಾಲಿ ಇದ್ದ ಕಾರಣ ಮನೆಯ ಕಡೆಗೆ ಗಮನ ನೀಡುತ್ತಿರಲಿಲ್ಲ ಎನ್ನಲಾಗಿದೆ.

ಇದೇ ವಿಚಾರಕ್ಕೆ  ದಂಪತಿ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಇತ್ತೀಚೆಗೆ ಮನೆ ಕೆಲಸದಾಕೆಯ ಜೊತೆಗೂ ಭಾಸ್ಕರ್ ಗೆ ಸಂಬಂಧವಿರುವುದಾಗಿ ಶ್ರುತಿಗೆ ಅನುಮಾನವಿತ್ತು. ಭಾಸ್ಕರ್ ನ ಆದಾಯವೂ ಚೆನ್ನಾಗಿತ್ತು. ಬಾಡಿಗೆ ಮನೆಗಳಿಂದಲೇ ತಿಂಗಳಿಗೆ 1.15 ಲಕ್ಷ ಆತ ಗಳಿಸುತ್ತಿದ್ದ. ಅದರಲ್ಲಿ ಹೆಚ್ಚಿನ ಹಣ ಮನೆ ಕೆಲಸದಾಕೆಗೆ ಖರ್ಚು ಮಾಡುತ್ತಿದ್ದ ಎಂದು ಪತ್ನಿಗೆ ಅನುಮಾನವಿತ್ತು. ಜೊತೆಗೆ  ಕಳೆದ ಒಂದು ತಿಂಗಳುಗಳಿಂದ ಮನೆಗೆ ಬರುವುದನ್ನು ನಿಲ್ಲಿಸಿದ್ದ ಭಾಸ್ಕರ್, ಸ್ನೇಹಿತರೊಂದಿಗೆ ವಾಸಿಸುತ್ತಿದ್ದ ಎನ್ನಲಾಗಿದೆ.

ಜೂನ್ 27 ರಂದು, ಮದ್ಯದ ಅಮಲಿನಲ್ಲಿ ಮನೆಗೆ ಬಂದಾಗ, ಶ್ರುತಿ ಮತ್ತೆ ಅವನೊಂದಿಗೆ ಜಗಳವಾಡಿದ್ದಾಳೆ. ಈ ಹಂತದಲ್ಲಿ ಸತಿ-ಪತಿ ಮಧ್ಯೆ ಮಾತಿನ ಚಕಮಕಿ ನಡೆದು ಪರಸ್ಪರ ಕೈ-ಕೈ ಮಿಲಾಯಿಸಿದ್ದಾರೆ. ಈ ಹಂತದಲ್ಲಿ ಕೆರಳಿದ ಶೃತಿ, ಪತಿ ಮುಖಕ್ಕೆ ಬಲವಾಗಿ ಗುದ್ದಿದ್ದಾಳೆ. ಈ ಪೆಟ್ಟಿಗೆ ಮದ್ಯದ ಅಮಲಿನಲ್ಲಿದ್ದ ಆತ ಕುಸಿದು ಬಿದ್ದಿದ್ದಾನೆ. ಬಳಿಕ ಅಡುಗೆ ಮನೆಯಿಂದ ಇಟ್ಟಿನ ಕೋಲು ತಂದು ಗಂಡನಿಗೆ ಆಕೆ ಬಾರಿಸಿದ್ದಾಳೆ. ಈ ಹೊಡೆತದಿಂದ ಭಾಸ್ಕರ್ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾನೆ. ಆತನ ಸಾವನ್ನಪ್ಪಿದ್ದಾನೆಂಬುದು ತಿಳಿದ ಕೂಡಲೇ ಮೃತದೇಹಕ್ಕೆ ಸ್ನಾನ ಮಾಡಿಸಿ, ಹಾಸಿಗೆ ಮೇಲೆ ಮಲಗಿಸಿದ್ದಾಳೆ. ಮರು ದಿನ ಬೆಳಗ್ಗೆ ತಮ್ಮ ಸಂಬಂಧಿಕರಿಗೆ ಪತಿ ಸ್ನಾನದ ಮನೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ ಎಂದು ಕಥೆ ಸೃಷ್ಟಿಸಿದ್ದಳು. ಆದರೆ, ಸೊಸೆ ಮೇಲೆ ಭಾಸ್ಕರ್‌ ಪೋಷಕರು ಶಂಕೆ ವ್ಯಕ್ತಪಡಿಸಿದ್ದರು. ಅಂತೆಯೇ ಸದ್ದುಗುಂಟೆಪಾಳ್ಯ ಠಾಣೆಯಲ್ಲಿ ಮೃತನ ಪೋಷಕರು ನೀಡಿದ ದೂರಿನ ಮೇರೆಗೆ ಶಂಕಾಸ್ಪದ ಸಾವು ಪ್ರಕರಣ ದಾಖಲಾಯಿತು.

ಈ ನಡುವೆ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಕೋಲಿನಿಂದ ನಡೆದ ಹಲ್ಲೆಯಿಂದ ಆತ ಮೃತಪಟ್ಟಿದ್ದಾನೆಂದು ವೈದ್ಯರು ಅಭಿಪ್ರಾಯ ತಿಳಿಸಿದ್ದರು. ಈ ವರದಿ ಆಧರಿಸಿ ಮಹಿಳೆಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version