7:18 AM Wednesday 29 - October 2025

ಜಮೀನಿನಲ್ಲಿ ವಿದ್ಯುತ್ ಕಂಬ ಇದ್ದರೆ ಪರಿಹಾರ ಸಿಗುತ್ತದೆಯೇ? ಇಲ್ಲಿದೆ ಸತ್ಯಾಂಶ

transformer
19/06/2024

ಬೆಂಗಳೂರು:  ಜಮೀನಿನಲ್ಲಿ ವಿದ್ಯುತ್ ಕಂಬ ಅಥವಾ ಟ್ರಾನ್ಸ್ ಫಾರ್ಮರ್ ಇದ್ದರೆ, ರೈತರಿಗೆ ಸರ್ಕಾರ ಪರಿಹಾರ ನೀಡುತ್ತದೆ ಎನ್ನುವ ಸುಳ್ಳು ವದಂತಿಯೊಂದು ಹರಡಿದ ಬೆನ್ನಲ್ಲೇ ಈ ಸುಳ್ಳು ಮಾಹಿತಿಯ ವಿಡಿಯೋವನ್ನು ಹರಿಯಬಿಟ್ಟವರ ವಿರುದ್ಧ ಬೆಸ್ಕಾಂ ದೂರು ನೀಡಿದೆ.

ರೈತರು ತಮ್ಮ ಜಮೀನಿನಲ್ಲಿ ವಿದ್ಯುತ್ ಕಂಬ ಅಥವಾ ಟ್ರಾನ್ಸ್‌ಫಾರ್ಮರ್ ಅಳವಡಿಸಿಕೊಂಡಿದ್ದರೆ ಸರ್ಕಾರ ದಿನಕ್ಕೆ 50 ರೂ. ಪರಿಹಾರ ನೀಡಲಿದೆ. ಗೃಹಬಳಕೆದಾರರು ಪ್ರತಿನಿತ್ಯ 2000ರಿಂದ 5000 ಯೂನಿಟ್ ವಿದ್ಯುತ್ ಬಳಸಿಕೊಳ್ಳಬಹುದು. ಅದಕ್ಕೆ ಸರ್ಕಾರ 5000 ರೂ. ಪರಿಹಾರ ಧನ ನೀಡಲಿದೆ ಎಂಬ ಸಂದೇಶ ನೀಡುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ಸತ್ಯಕ್ಕೆ ದೂರವಾದುದು ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಈ ಬಗ್ಗೆ ಯೂಟ್ಯೂಬ್ ಚಾನೆಲ್ ವೊಂದರಲ್ಲಿ 5 ನಿಮಿಷ ಅವಧಿಯ ಒಂದು ವೀಡಿಯೊ ತುಣುಕನ್ನು ಹರಿಯಬಿಡಲಾಗಿದ್ದು,  ವಿಡಿಯೋ ಹರಿಯಬಿಟ್ಟವರ ವಿರುದ್ಧ ವಿಧಾನಸೌಧ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ.

ಕೃಷಿಕರ ಜಮೀನಿನಲ್ಲಿ ವಿದ್ಯುತ್ ಕಂಬಗಳು ಹಾಗೂ ಟ್ರಾನ್ಸ್‌ ಫಾರ್ಮರ್ ಇದ್ದರೆ ಅವರಿಗೆ ಸರ್ಕಾರ ಪ್ರತಿ ವಾರ 100 ರೂ.ಗಳ ಪರಿಹಾರ ನೀಡಲಿದೆ. ಅಂತಹ ರೈತರಿಗೆ ತಿಂಗಳಿಗೆ 2000ರಿಂದ 5000 ಯೂನಿಟ್‌ ವರೆಗೆ ಮನೆ ಬಳಕೆ ಹಾಗೂ ನೀರಾವರಿ ವಿದ್ಯುತ್ ಉಚಿತವಾಗಿ ನೀಡಲಾಗುವುದು. ರೈತರ ಹೊಲಗಳಲ್ಲಿರುವ ವಿದ್ಯುತ್ ಕಂಬಗಳಲ್ಲಿ ವಿದ್ಯುತ್ ಸಂಬಂಧಿಸಿದ ಸಮಸ್ಯೆಗಳು ಕಂಡುಬಂದಲ್ಲಿ 44 ಗಂಟೆಗಳೊಳಗೆ ಪರಿಹರಿಸದಿದ್ದರೆ ಅಂತಹ ರೈತರಿಗೆ ದಿನಕ್ಕೆ 50 ರೂ. ಪರಿಹಾರ ನೀಡಲಾಗುವುದು ಎಂದು ವಿಡಿಯೊದಲ್ಲಿ ಹೇಳಲಾಗಿತ್ತು.

ಈ ವಿಡಿಯೋ ಬಗ್ಗೆ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿರುವ ಬೆಸ್ಕಾಂ, ಇದು ಸತ್ಯಕ್ಕೆ ದೂರವಾಗಿದೆ. ವೀಡಿಯೊದಲ್ಲಿನ ಎಲ್ಲಾ ಹೇಳಿಕೆಗಳು ಸಂಪೂರ್ಣ ಸುಳ್ಳು ಮಾಹಿತಿಯಿಂದ ಕೂಡಿದ್ದು, ರೈತರನ್ನು ತಪ್ಪು ದಾರಿಗೆ ಎಳೆಯುವ ದುರುದ್ದೇಶ ಹೊಂದಿದೆ. ಈ ರೀತಿಯ ತಪ್ಪು ಮಾಹಿತಿಯನ್ನು ಹರಿಬಿಟ್ಟಿರುವ ಮಹಿಳೆ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ವಿಧಾನಸೌಧ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version