12:18 PM Saturday 1 - November 2025

‘ನೀವು ಮುಸ್ಲಿಂ ಪೊಲೀಸರನ್ನು ಪಾಕಿಸ್ತಾನಿ ಎಂದು ಕರೆಯುತ್ತೀರಾ?: ‘ಖಲಿಸ್ತಾನಿ’ ಹೇಳಿಕೆಗೆ ಮಮತಾ ಬ್ಯಾನರ್ಜಿ ತಿರುಗೇಟು

22/02/2024

ಸಿಖ್ ಪೊಲೀಸ್ ಅಧಿಕಾರಿಯನ್ನು ‘ಖಲಿಸ್ತಾನಿ’ ಎಂದು ಕರೆದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ಒಬ್ಬ ಅಧಿಕಾರಿ ಪೇಟ ಧರಿಸಿದರೆ, ಅವರನ್ನು ಖಲಿಸ್ತಾನಿ ಎಂದು ಹೇಗೆ ಕರೆಯುತ್ತೀರಿ?’ ಎಂದು ಪ್ರಶ್ನಿಸಿದ್ದಾರೆ.

ಮಂಗಳವಾರ ಸಿಖ್ ಪೊಲೀಸ್ ಅಧಿಕಾರಿಯೊಬ್ಬರು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರ ಗುಂಪನ್ನು ಎದುರಿಸಿದ ಘಟನೆಯ ನಂತರ ಅವರ ಈ ಹೇಳಿಕೆ ಬಂದಿದೆ.
ಅಂತಾರಾಷ್ಟ್ರೀಯ ಮಾತೃಭಾಷಾ ದಿನಾಚರಣೆಗಾಗಿ ಕೋಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಬ್ಯಾನರ್ಜಿ, “ಕರ್ತವ್ಯದಲ್ಲಿದ್ದ ಅಧಿಕಾರಿಯ ತಪ್ಪು ಏನು..? ಸೇನೆಯಲ್ಲಿ ಸಿಖ್ ರೆಜಿಮೆಂಟ್ ಇಲ್ಲವೇ? ನಾವು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇವೆ. ಒಬ್ಬ ಅಧಿಕಾರಿ ಪೇಟ ಧರಿಸಿದರೆ, ನೀವು ಅವರನ್ನು ಖಲಿಸ್ತಾನಿ ಎಂದು ಹೇಗೆ ಕರೆಯುತ್ತೀರಿ..? ಹಾಗೆಯೇ ಮುಸ್ಲಿಂ ಐಎಎಸ್, ಐಪಿಎಸ್ ಮತ್ತು ಡಬ್ಲ್ಯೂಬಿಸಿಎಸ್ ಅಧಿಕಾರಿಗಳು ಇದ್ದಾರೆ. ಅವರು ಮುಸ್ಲಿಂ ಅಧಿಕಾರಿ ಎಂಬ ಕಾರಣಕ್ಕೆ ಅವರನ್ನು ಪಾಕಿಸ್ತಾನಿ ಎಂದು ಕರೆಯುತ್ತೀರಾ ಎಂದು ಪ್ರಶ್ನಿಸಿದ್ದಾರೆ.

ಹಿಂಸಾಚಾರ ಪೀಡಿತ ಸಂದೇಶ್ ಖಾಲಿ ಬಳಿ ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವಿನ ಮುಖಾಮುಖಿಯ ಸಂದರ್ಭದಲ್ಲಿ ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಸಿಖ್ ಪೊಲೀಸ್ ಅಧಿಕಾರಿಯ ವಿರುದ್ಧ ‘ಖಲಿಸ್ತಾನಿ’ ನಿಂದನೆಯನ್ನು ಬಳಸಿದ್ದಾರೆ ಎಂದು ಆರೋಪಿಸಿ ಪಶ್ಚಿಮ ಬಂಗಾಳ ಪೊಲೀಸರು ಬುಧವಾರ ವೀಡಿಯೊವನ್ನು ಬಿಡುಗಡೆ ಮಾಡಿದ್ದರು.

ಇತ್ತೀಚಿನ ಸುದ್ದಿ

Exit mobile version