ಯತ್ನಾಳ್ ಸ್ವಯಂ ಘೋಷಿತ ನಾಯಕ: ಮುರುಗೇಶ್ ನಿರಾಣಿ ವಾಗ್ದಾಳಿ

ನವದೆಹಲಿ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ವಯಂ ಘೋಷಿತ ನಾಯಕ ಎಂದು ಬಿಜೆಪಿ ಮುಖಂಡ ಮುರುಗೇಶ ನಿರಾಣಿ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಹಾಗೂ ವಿಪಕ್ಷ ನಾಯಕರ ಆಯ್ಕೆಯ ಮುನಿಸು ದಿನದಿಂದ ದಿನಕ್ಕೆ ಬಿಜೆಪಿಯೊಳಗೆ ಹೊಗೆಯಾಡುತ್ತಿದ್ದು, ಪಕ್ಷದೊಳಗೆ ವಿಪಕ್ಷ ಸೃಷ್ಟಿಯಾಗುವ ಸನ್ನಿವೇಶಗಳು ಮುಂದುವರಿದಿವೆ. ಇದರ ಭಾಗವಾಗಿ ಯತ್ನಾಳ್ ವಿರುದ್ಧ ನಿರಾಣಿ ಇದೀಗ ಹರಿಹಾಯ್ದಿದ್ದಾರೆ.
ಯತ್ನಾಳ್ ಪಕ್ಷದ ಹಿರಿಯ ನಾಯಕ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ದುರುದ್ದೇಶದಿಂದ ಟೀಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ನಿರಾಣಿ, ಯತ್ನಾಳ್ ಅವರಿಗೆ ಸಮಾಜ ತಕ್ಕ ಪಾಠ ಕಲಿಸಲಿದೆ ಎಂದರು.
ತಮ್ಮನ್ನು ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕ ಮಾಡಬೇಕು ಎಂದು ಯತ್ನಾಳ್ ಹೇಳಿಕೊಂಡು ಓಡಾಡುತ್ತಿದ್ದಾರೆ. ಅವರನ್ನು ವಿಧಾನ ಸಭಾ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕರನ್ನಾಗಿ ಮಾಡಲಾಯಿತು. ಓಡಾಟಕ್ಕೆ ಹೆಲಿಕಾಫ್ಟರ್ ಕೂಡ ನೀಡಲಾಯಿತು. ಆದ್ರೆ ಅವರು ಓಡಾಡಿದ 40 ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲ್ಲಲೇ ಇಲ್ಲ ಎಂದು ನಿರಾಣಿ ವ್ಯಂಗ್ಯವಾಡಿದರು.
ವಿಜಯಪುರ ಜಿಲ್ಲೆಯಲ್ಲೇ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಯತ್ನಾಳ್ ಅವರಿಂದ ಸಾಧ್ಯವಾಗಲಿಲ್ಲ, ಪಕ್ಷದ ನಾಯಕರ ವಿರುದ್ಧವೇ ಟೀಕೆ ಮಾಡಿ ನಾಯಕರಾಗಲು ಹೊರಟಿದ್ದಾರೆ ಎಂದರು.
ದೀಪ ಆರುವ ಮುನ್ನ ಜೋರಾಗಿ ಉರಿಯುತ್ತದೆ. ಯತ್ನಾಳ್ ಅವರ ಕಥೆಯೂ ಅದೇ ರೀತಿಯಾಗಿ ಆಗಲಿದೆ ಎಂದು ಮುರುಗೇಶ್ ನಿರಾಣಿ ಯತ್ನಾಳ್ ಗೆ ತಿರುಗೇಟು ನೀಡಿದರು.