ಪ್ರಧಾನಿ ಮೋದಿ ಅತೀ ದೊಡ್ಡ ನುಸುಳುಕೋರ, ಸೌದಿಯಲ್ಲಿ ಹಸ್ತಲಾಘವ ಭಾರತದಲ್ಲಿ ಹಿಂದೂ ಮುಸ್ಲಿಮ್: ಮಮತಾ ಬ್ಯಾನರ್ಜಿ ವಾಗ್ದಾಳಿ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ಕೋಲ್ಕತ್ತಾದ ರೆಡ್ ರೋಡ್‌ನಲ್ಲಿ ನಡೆದ ಈದ್ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅನೇಕ ಜನರ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಮಮತಾ ಆರೋಪಿಸಿದರು. ಈ ಬಗ್ಗೆ ತಾವು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವುದಾಗಿ ತಿಳಿಸಿದ ಅವರು, ಬಂಗಾಳದ ಜನರ ಹಕ್ಕುಗಳ ರಕ್ಷಣೆಗಾಗಿ ತಾವು ಸದಾ ಹೋರಾಡುವುದಾಗಿ ಭರವಸೆ ನೀಡಿದರು.
ಪ್ರಧಾನಿ ಮೋದಿ ವಿದೇಶ ಪ್ರವಾಸದ ವೇಳೆ ಸೌದಿ ಅರೇಬಿಯಾದಲ್ಲಿ ಹಸ್ತಲಾಘವ ಮಾಡುತ್ತಾರೆ, ಆದರೆ ಭಾರತಕ್ಕೆ ಬಂದ ತಕ್ಷಣ ಹಿಂದೂ-ಮುಸ್ಲಿಂ ರಾಜಕಾರಣ ಆರಂಭಿಸುತ್ತಾರೆ ಎಂದು ಟೀಕಿಸಿದರು. ಜನರನ್ನು ‘ನುಸುಳುಕೋರರು’ ಎಂದು ಕರೆಯುವ ಮೋದಿಯವರೇ “ಅತಿ ದೊಡ್ಡ ನುಸುಳುಕೋರ” ಎಂದು ಅವರು ಕಿಡಿಕಾರಿದರು.
ಬಿಜೆಪಿ ಸರ್ಕಾರವು ರಾಜ್ಯದ ಆಡಳಿತವನ್ನು “ಕಬಳಿಸಲು” ಯತ್ನಿಸುತ್ತಿದೆ. ಇದು “ಕಳ್ಳರು ಮತ್ತು ದ್ರೋಹಿಗಳ ಪಕ್ಷ” ಎಂದು ಅವರು ಬಣ್ಣಿಸಿದರು.
ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮಾತನಾಡಿ, “ರಂಜಾನ್ ನಲ್ಲಿ ರಾಮನಿದ್ದಾನೆ, ದೀಪಾವಳಿಯಲ್ಲಿ ಅಲಿ ಇದ್ದಾನೆ. ಚಂದ್ರನನ್ನು ನೋಡಿ ನಾವು ಈದ್ ಮತ್ತು ಕರವ ಚೌತ್ ಎರಡನ್ನೂ ಆಚರಿಸುತ್ತೇವೆ. ಇದು ನಮ್ಮ ಸಂಸ್ಕೃತಿ,” ಎಂದು ಕೋಮು ಸೌಹಾರ್ದತೆಯ ಬಗ್ಗೆ ಮಾತನಾಡಿದರು.
ಬಂಗಾಳದ ಸಂಸ್ಕೃತಿಯನ್ನು ಹಾಳುಮಾಡಲು ಮತ್ತು ಜನರನ್ನು ವಿಭಜಿಸಲು ಯತ್ನಿಸುವವರ ವಿರುದ್ಧ ಜನರು ತಲೆಬಾಗುವುದಿಲ್ಲ ಎಂದು ಅವರು ಈ ಸಂದರ್ಭದಲ್ಲಿ ಎಚ್ಚರಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























