ಪೊಲೀಸರು ವಿಚಾರಣೆ ನಡೆಸಿ ಕಳುಹಿಸಿದ ಬೆನ್ನಲ್ಲೇ ಯುವಕ ಆತ್ಮಹತ್ಯೆಗೆ ಶರಣು
ಚಿಕ್ಕಮಗಳೂರು: ಪೊಲೀಸರು ವಿಚಾರಣೆ ನಡೆಸಿ ಕಳುಹಿಸಿದ ಬೆನ್ನಲ್ಲೇ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತರೀಕೆರೆ ತಾಲೂಕಿನ ಕುಡ್ಲೂರು ಗ್ರಾಮದ ನಿವಾಸಿ ಚಂದನ್ (20) ಮೃತಪಟ್ಟ ದುರ್ದೈವಿ.
ಇತ್ತೀಚೆಗೆ ಕುಡ್ಲೂರು ಗ್ರಾಮದ ಯುವತಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ನಾಪತ್ತೆಯಾಗಿದ್ದಳು. ಈ ಸಂಬಂಧ ತನಿಖೆ ಕೈಗೆತ್ತಿಕೊಂಡಿದ್ದ ಬೀರೂರು ಪೊಲೀಸರು, ಯುವತಿಯ ಮೊಬೈಲ್ ಕರೆಗಳ ವಿವರವನ್ನು (CDR) ಪರಿಶೀಲಿಸಿದ್ದರು. ಈ ವೇಳೆ ಆಕೆಯ ಮೊಬೈಲ್ ನಲ್ಲಿ ಚಂದನ್ ನಂಬರ್ ಪತ್ತೆಯಾಗಿದ್ದು, ಇಬ್ಬರ ನಡುವೆ ಮಾತುಕತೆ ನಡೆದಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಸಾಮಾನ್ಯ ವಿಚಾರಣೆಗಾಗಿ (Regular Enquiry) ಪೊಲೀಸರು ಚಂದನ್ ನನ್ನು ಠಾಣೆಗೆ ಕರೆಸಿದ್ದರು.
ವಿಚಾರಣೆ ಮುಗಿದ ಬಳಿಕ ನಿನ್ನೆ ಸಂಜೆ ಪೊಲೀಸರು ಚಂದನ್ ನನ್ನು ಮನೆಗೆ ಕಳುಹಿಸಿಕೊಟ್ಟಿದ್ದರು. ಆದರೆ, ಮನೆಗೆ ಮರಳಿದ ಕೆಲವೇ ಸಮಯದಲ್ಲಿ ಚಂದನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಯುವತಿ ನಾಪತ್ತೆಯಾದ ಪ್ರಕರಣಕ್ಕೂ ತನಗೂ ಸಂಬಂಧವಿದೆ, ಆಕೆ ಓಡಿಹೋಗಲು ತಾನೇ ಕಾರಣ ಎಂದು ಸ್ಥಳೀಯರು ಹಾಗೂ ಸಾರ್ವಜನಿಕರು ಮಾತನಾಡಿಕೊಳ್ಳಲಾರಂಭಿಸಿದ್ದರು ಎನ್ನಲಾಗಿದೆ. ಇದರಿಂದ ತೀವ್ರವಾಗಿ ಮನನೊಂದಿದ್ದ ಚಂದನ್, ಆತ್ಮಹತ್ಯೆಗೂ ಮುನ್ನ ತನ್ನ ತಾಯಿಗೆ ಮೊಬೈಲ್ನಲ್ಲಿ ಸಂದೇಶ (Message) ಒಂದನ್ನು ಕಳುಹಿಸಿ ನಂತರ ಈ ಕಠಿಣ ನಿರ್ಧಾರ ಕೈಗೊಂಡಿದ್ದಾನೆ ಎಂದು ತಿಳಿದುಬಂದಿದೆ.
ಚಂದನ್ ಸಾವಿಗೆ ಪೊಲೀಸರ ವಿಚಾರಣೆ ಕಾರಣವೇ ಅಥವಾ ಸಾರ್ವಜನಿಕರ ನಿಂದನೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೇ ಎಂಬುದು ಸದ್ಯಕ್ಕೆ ನಿಖರವಾಗಿ ತಿಳಿದುಬಂದಿಲ್ಲ. ಪೊಲೀಸರ ಉನ್ನತ ಮಟ್ಟದ ತನಿಖೆಯಿಂದಷ್ಟೇ ಚಂದನ್ ಸಾವಿನ ಹಿಂದಿನ ನೈಜ ಕಾರಣ ಹೊರಬರಬೇಕಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























