ದೇಶಸೇವೆಗೆ ಸಜ್ಜಾದ ಬಿನ್ನಡಿ ಗ್ರಾಮದ ಯುವಕ: ‘ಅಗ್ನಿವೀರ್’ ಆಗಿ ಸಜಿತ್ ಆಯ್ಕೆ, ಗ್ರಾಮದಲ್ಲಿ ಸಂಭ್ರಮ
ಕೊಟ್ಟಿಗೆಹಾರ: ದೇಶದ ಸುರಕ್ಷತೆ ಹಾಗೂ ರಾಷ್ಟ್ರಸೇವೆಯ ಮಹದಾಸೆಯೊಂದಿಗೆ ಸಮೀಪದ ಬಿನ್ನಡಿ ಗ್ರಾಮದ ಯುವಕ ಬಿ.ಎಸ್. ಸಜಿತ್ ಅವರು ಭಾರತೀಯ ಸೇನೆಯ ‘ಅಗ್ನಿವೀರ್’ ಹುದ್ದೆಗೆ ಸೇರ್ಪಡೆಯಾಗಿದ್ದಾರೆ. ಯುವಕನ ಈ ಸಾಧನೆ ಬಿನ್ನಡಿ ಗ್ರಾಮಸ್ಥರಲ್ಲಿ ಭಾರೀ ಸಂತಸ ಮೂಡಿಸಿದೆ.
ಅಗ್ನಿವೀರ್ ಆಗಿ ಆಯ್ಕೆಯಾಗಿರುವ ಬಿ.ಎಸ್. ಸಜಿತ್ ಅವರು ಬಿನ್ನಡಿ ಗ್ರಾಮದ ಸಂದೇಶ್ ಜಯಶೀಲ ದಂಪತಿಯ ಪುತ್ರರಾಗಿದ್ದಾರೆ. ತರಬೇತಿಗೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಸಜಿತ್, “ದೇಶದ ಸುರಕ್ಷತೆ ಮತ್ತು ರಾಷ್ಟ್ರಸೇವೆಯೇ ನನ್ನ ಮೊದಲ ಆದ್ಯತೆ. ಇದೇ ಉದ್ದೇಶದಿಂದ ನಾನು ಅಗ್ನಿವೀರ್ ಹುದ್ದೆಯನ್ನು ಆಯ್ಕೆ ಮಾಡಿಕೊಂಡಿದ್ದೇನೆ,” ಎಂದು ಹೆಮ್ಮೆಯಿಂದ ತಿಳಿಸಿದರು.
ಸಜಿತ್ ಅವರು ಭಾರತೀಯ ಸೇನೆಗೆ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಬಿನ್ನಡಿ ಗ್ರಾಮದ ಹಿರಿಯರು ಹಾಗೂ ಯುವಕರು ಒಟ್ಟಾಗಿ ಅವರಿಗೆ ಆತ್ಮೀಯ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಸಜಿತ್ ಅವರಿಗೆ ಹಾರ ಹಾಕಿ, ಸಿಹಿ ಹಂಚಿ, ಮುಂದಿನ ಸೇನಾ ಜೀವನಕ್ಕೆ ಶುಭ ಹಾರೈಸಿ ಗೌರವಪೂರ್ವಕವಾಗಿ ಬೀಳ್ಕೊಡಲಾಯಿತು.
“ನಮ್ಮ ಹಳ್ಳಿಯ ಯುವಕನೊಬ್ಬ ದೇಶ ಕಾಯುವ ಅತ್ಯುನ್ನತ ರಾಷ್ಟ್ರಸೇವೆಯ ಪಥವನ್ನು ಆಯ್ಕೆ ಮಾಡಿಕೊಂಡಿರುವುದು ಇಡೀ ಗ್ರಾಮಕ್ಕೆ ಹೆಮ್ಮೆಯ ವಿಷಯ. ಇಂದಿನ ಯುವ ಪೀಳಿಗೆಗೆ ಸಜಿತ್ ಮಾದರಿಯಾಗಿದ್ದಾರೆ,” ಎಂದು ಗ್ರಾಮಸ್ಥರು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ಈ ಸನ್ಮಾನ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಗ್ರಾಮದ ಹಿರಿಯರಾದ ಕೃಷ್ಣಪ್ಪ, ಮಲ್ಲೇಶ್, ಪ್ರದೀಪ್ ಗೌಡ, ಪ್ರಭಾಕರ್ ಬಿನ್ನಡಿ, ಸುರೇಶ್, ರಮೇಶ್, ಗಿರೀಶ್, ಮಂಜುನಾಥ್, ಸಂದೇಶ್, ಶರತ್ ಬಿನ್ನಡಿ, ಪ್ರದೀಪ್ ರಾಜ್ ಸೇರಿದಂತೆ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದು ಯುವ ಸೈನಿಕನಿಗೆ ಬೆನ್ನು ತಟ್ಟಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























