ಲೈಂಗಿಕ ದೌರ್ಜನ್ಯ ಬಯಲಿಗೆಳೆಯುವುದಾಗಿ ಬೆದರಿಕೆ ಹಾಕಿದ್ದ ಯುವತಿಯ ಹತ್ಯೆ; ಕಾಡುಪ್ರಾಣಿಗಳಿಗೆ ಆಹಾರವಾಗಲೆಂದು ಮೃತದೇಹ ಬೆಟ್ಟದ ಮೇಲೆ ಎಸೆದ ಪ್ರೇಮಿ!

bhiwadi
15/08/2026

ರಾಜಸ್ಥಾನ (ಆಲ್ವಾರ್/ಭಿವಾಡಿ): ತಮ್ಮ ಮೇಲಾಗುತ್ತಿದ್ದ ಲೈಂಗಿಕ ದೌರ್ಜನ್ಯಗಳನ್ನು ಸಮಾಜದ ಮುಂದೆ ಬಯಲು ಮಾಡುವುದಾಗಿ ಬೆದರಿಕೆ ಹಾಕಿದ್ದ 18 ವರ್ಷದ ಯುವತಿಯೊಬ್ಬಳನ್ನು ಆಕೆಯ ಪ್ರೇಮಿಯೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ರಾಜಸ್ಥಾನದ ಆಲ್ವಾರ್ ಜಿಲ್ಲೆಯಲ್ಲಿ ನಡೆದಿದೆ. ಹತ್ಯೆಯ ನಂತರ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಯುವತಿಯ ಮೃತದೇಹವನ್ನು ಕಾಡುಪ್ರಾಣಿಯ ಗುಹೆಯೊಂದರ ಮುಂದೆ ಎಸೆದು ಬರಲಾಗಿತ್ತು.

ಈ ಕ್ರೂರ ಕೃತ್ಯಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಬಿಹಾರದ ಸಹರ್ಸಾ ಮೂಲದ ಮೊಹಮ್ಮದ್ ಸಾಗರ್ ಅಲಿ (ಅಲಿಯಾಸ್ ಶಹಬಾಜ್) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಬಿಹಾರದ ಸಿವಾನ್ ಮೂಲದ ಯುವತಿಯು ಭಿವಾಡಿಯ ಅಲ್ಮ್‌ ಪುರದಲ್ಲಿ ತಾಯಿಯೊಂದಿಗೆ ವಾಸಿಸುತ್ತಿದ್ದಳು. ಜೂನ್ 19, 2026 ರಿಂದ ಆಕೆ ಕಾಣೆಯಾಗಿದ್ದಳು. ಮೂರು ದಿನಗಳ ನಂತರ ಸೂರಜ್ ಸಿನೆಮಾ ಬಳಿಯ ಬೆಟ್ಟದ ಮೇಲೆ ಯುವತಿಯ ಶವ ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆರೋಪಿ ಆಕೆಯ ತಲೆಗೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದ.

ತನಿಖೆಯ ವೇಳೆ ಯುವತಿಯ ಮೇಲೆ ಹಲವರಿಂದ ಲೈಂಗಿಕ ದೌರ್ಜನ್ಯ ನಡೆದಿರುವುದು ಬೆಳಕಿಗೆ ಬಂದಿದೆ. ತಾಯಿಯ ಸ್ನೇಹಿತನೋರ್ವ ಆಕೆಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ. ಅಲ್ಲದೆ ತಾಯಿಯು ಆಕೆಯನ್ನು ಆಕೆಯ ಸೋದರಮಾವನಿಗೆ (ಮಾವ) ವಿವಾಹವಾಗುವಂತೆ ಒತ್ತಾಯಿಸುತ್ತಿದ್ದಳು. ಜೊತೆಗೆ ಪ್ರೇಮಿ ಶಹಬಾಜ್ ಮತ್ತು ಆತನ ಸಹಚರರು ಕೂಡ ಆಕೆಯ ದುರ್ಬಳಕೆ ಮಾಡಿಕೊಳ್ಳುತ್ತಿದ್ದರು.

ತನ್ನ ಮೇಲಾದ ದೌರ್ಜನ್ಯವನ್ನು ಬಯಲಿಗೆಳೆಯುವುದಾಗಿ ಯುವತಿ ಬೆದರಿಕೆ ಹಾಕಿದ್ದಳು. ಇದರಿಂದ ಭಯಗೊಂಡ ಶಹಬಾಜ್, ಯುವತಿಯನ್ನು ಬೆಟ್ಟದ ಮೇಲೆ ಕರೆದೊಯ್ದು ಕೊಲೆ ಮಾಡಿದ್ದ. ಬಳಿಕ ಸಾಕ್ಷ್ಯ ಸಿಗದಂತೆ ಮೃತದೇಹವನ್ನು ಕಾಡುಪ್ರಾಣಿಗಳು ತಿಂದು ಮುಗಿಸಲಿ ಎಂಬ ಉದ್ದೇಶದಿಂದ ಪ್ರಾಣಿಯ ಗುಹೆಯೊಂದರ ಎದುರು ಎಸೆದು ಪರಾರಿಯಾಗಿದ್ದ.

ಘಟನೆಯ ನಂತರ ತಲೆಮರೆಸಿಕೊಂಡಿದ್ದ ಆರೋಪಿಯ ಪತ್ತೆಗೆ ರಾಜಸ್ಥಾನ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದರು. ರಾಜಸ್ಥಾನ, ಹರಿಯಾಣ, ದೆಹಲಿ, ಉತ್ತರ ಪ್ರದೇಶ, ಮಧ್ಯಪ್ರದೇಶ ಹಾಗೂ ಬಿಹಾರ ಸೇರಿದಂತೆ 6 ರಾಜ್ಯಗಳಲ್ಲಿ ಸುಮಾರು 7,500 ಕಿಲೋಮೀಟರ್‌ ಗಳಿಗಿಂತ ಹೆಚ್ಚು ದೂರ ಬೆನ್ನಟ್ಟಿ, ನೂರಾರು ಸಿಸಿಟಿವಿ ದೃಶ್ಯಾವಳಿ ಹಾಗೂ ಸೈಬರ್ ಸೆಲ್ ಸಹಾಯದಿಂದ ಕೊನೆಗೂ ಬಿಹಾರದ ಸಹರ್ಸಾದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಸಹಚರರ ಕುರಿತು ಫೂಲ್ ಬಾಗ್ ಠಾಣೆಯ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version