ಹೊಸ ಕಾರಿನಲ್ಲಿ ಚಾಲನೆ ಕಲಿಯುತ್ತಿದ್ದ ಮಹಿಳೆ ಕೆರೆಗೆ ಬಿದ್ದು ದಾರುಣ ಸಾವು
ಕೊಲ್ಕತ್ತಾ: ಹೊಸ ಕಾರಿನಲ್ಲಿ ಚಾಲನೆ ಕಲಿಯುತ್ತಿದ್ದ 42 ವರ್ಷದ ಕಾರ್ಪೊರೇಟ್ ಉದ್ಯೋಗಿಯೊಬ್ಬರು ಕಾರು ನಿಯಂತ್ರಣ ತಪ್ಪಿ ಕೆರೆಗೆ ಬಿದ್ದು ಉಸಿರುಗಟ್ಟಿ ಸಾವನ್ನಪ್ಪಿರುವ ದಾರುಣ ಘಟನೆ ಕೊಲ್ಕತ್ತಾದ ಕೆಸ್ಟೋಪುರ ಪ್ರದೇಶದಲ್ಲಿ ನಡೆದಿದೆ.
ಮೃತರನ್ನು ಸುಮಿತ್ರಾ ದಾಸ್ (42) ಎಂದು ಗುರುತಿಸಲಾಗಿದೆ. ಇವರು ತಮ್ಮ ಚಾಲನಾ ಪರೀಕ್ಷೆಗೆ (Driving Test) ಸಿದ್ಧತೆ ನಡೆಸುತ್ತಿದ್ದರು.
ಬುಧವಾರ ಬೆಳಿಗ್ಗೆ ಸುಮಾರು 7:45ರ ಸುಮಾರಿಗೆ ಸುಮಿತ್ರಾ ದಾಸ್ ಅವರು ತಮ್ಮ ಮಗಳನ್ನು ಬಸ್ ಸ್ಟಾಪ್ ಗೆ ಬಿಟ್ಟು ಮನೆಗೆ ಮರಳಿದ್ದರು. ಬಳಿಕ ಗ್ಯಾರೇಜ್ ನಲ್ಲಿದ್ದ ತಮ್ಮ ಹೊಸ ಕಾರನ್ನು ಹೊರತೆಗೆದು ಅಭ್ಯಾಸ ಮಾಡಲು ಯತ್ನಿಸಿದ್ದಾರೆ.
ಗ್ಯಾರೇಜ್ ಬಳಿಯ ಖಾಲಿ ಜಾಗದಲ್ಲಿ ಕಾರು ರಿವರ್ಸ್ ಅಥವಾ ಮುಂಭಾಗಕ್ಕೆ ತೆಗೆಯುವಾಗ, ಬ್ರೇಕ್ ಬದಲಿಗೆ ಆಕ್ಸಿಲೇಟರ್ ಅನ್ನು ಜೋರಾಗಿ ತುಳಿದಿದ್ದಾರೆ ಎನ್ನಲಾಗಿದೆ. ಇದರಿಂದ ಕಾರು ವೇಗವಾಗಿ ಮುನ್ನುಗ್ಗಿ ಎದುರಿಗಿದ್ದ 10–12 ಅಡಿ ಆಳದ ಕೆರೆಗೆ ಬಿದ್ದಿದೆ.
ಕಾರು ನೀರಿಗೆ ಬೀಳುತ್ತಿದ್ದಂತೆ ಅದರ ಸೆಂಟ್ರಲ್ ಲಾಕಿಂಗ್ (Central Locking) ಸಿಸ್ಟಮ್ ಬ್ಲಾಕ್ ಆಗಿದೆ. ಇದರಿಂದಾಗಿ ಬಾಗಿಲುಗಳನ್ನು ತೆರೆಯಲು ಸಾಧ್ಯವಾಗದೆ ಸುಮಿತ್ರಾ ಕಾರಿನೊಳಗೆ ಸಿಲುಕಿಕೊಂಡಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ಸ್ಥಳೀಯರು ಕೆರೆಗೆ ಧುಮುಕಿ ಮಹಿಳೆಯನ್ನು ರಕ್ಷಿಸಲು ಯತ್ನಿಸಿದರೂ ಕಾರಿನ ಬಾಗಿಲು ತೆರೆಯಲು ಸಾಧ್ಯವಾಗಲಿಲ್ಲ. ನಂತರ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸುಮಾರು ಒಂದೂವರೆ ಗಂಟೆಗಳ ಕಾರ್ಯಚರಣೆ ಬಳಿಕ ಕ್ರೇನ್ ನೆರವಿನಿಂದ ಕಾರನ್ನು ಮೇಲೆತ್ತಿದ್ದಾರೆ.
ಆದರೆ, ಅಷ್ಟರಲ್ಲಾಗಲೇ ಮಹಿಳೆ ಉಸಿರುಗಟ್ಟಿ ಕೊನೆಯುಸಿರೆಳೆದಿದ್ದರು. ಕಾರಿನ ಹಿಂಬದಿಯ ಸೀಟಿನಲ್ಲಿ ಅವರ ಮೃತದೇಹ ಪತ್ತೆಯಾಗಿದ್ದು, ಕಾರಿನಿಂದ ಹೊರಬರಲು ಅವರು ಹಿಂಭಾಗಕ್ಕೆ ಬಂದು ಗ್ಲಾಸ್ ಒಡೆಯಲು ಯತ್ನಿಸಿ ವಿಫಲರಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಸುಮಿತ್ರಾ ದಾಸ್ ಅವರ ಕುಟುಂಬವು ಎರಡು ತಿಂಗಳ ಹಿಂದೆಯಷ್ಟೇ ಹೊಸ ಕಾರನ್ನು ಖರೀದಿಸಿತ್ತು. ಆಗಸ್ಟ್ 22 ರಂದು ಅವರಿಗೆ ಚಾಲನಾ ಪರೀಕ್ಷೆ (Driving Test) ನಿಗದಿಯಾಗಿತ್ತು. ಅದಕ್ಕಾಗಿ ಅವರು ದಿನನಿತ್ಯ ಚಾಲನೆ ಅಭ್ಯಾಸ ಮಾಡುತ್ತಿದ್ದರು. ಈ ಘಟನೆಯಿಂದ ಕುಟುಂಬಸ್ಥರು ಹಾಗೂ ಸ್ಥಳೀಯರು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























