ಕೋತಿ ದಾಳಿಗೆ 91 ವರ್ಷದ ವೃದ್ಧೆ ದುರಂತ ಸಾವು, ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
22/09/2026
ಕೊಪ್ಪಳ: ನಗರದ ಬಿ.ಟಿ. ಪಾಟೀಲ್ ನಗರದಲ್ಲಿ ಕೋತಿಯೊಂದು ಏಕಾಏಕಿ ನಡೆಸಿದ ದಾಳಿಗೆ 91 ವರ್ಷದ ವೃದ್ಧೆಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ನಜಮುನಿಸಾ ಬೇಗಂ (91) ಮೃತಪಟ್ಟ ದುರ್ದೈವಿ.
ನಜಮುನಿಸಾ ಬೇಗಂ ಅವರು ತಮ್ಮ ಮನೆಯ ಹೊರಗಡೆ ನಿಂತುಕೊಂಡಿದ್ದಾಗ ಹಠಾತ್ತನೆ ಬಂದ ಕೋತಿಯೊಂದು ಅವರ ಮೇಲೆ ದಾಳಿ ನಡೆಸಿ ಬಲವಾಗಿ ತಳ್ಳಿದೆ. ಕೋತಿ ತಳ್ಳಿದ ರಭಸಕ್ಕೆ ಕೆಳಗೆ ಬಿದ್ದ ಅವರ ತಲೆಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಬಳಿಕ ನೆಲಕ್ಕೆ ಬಿದ್ದಿದ್ದ ವೃದ್ಧೆಯನ್ನು ಎಬ್ಬಿಸಲು ಓಡಿ ಬಂದ ಮತ್ತೊಬ್ಬ ಮಹಿಳೆಯ ಮೇಲೆಯೂ ಕೋತಿ ದಾಳಿ ನಡೆಸಲು ಯತ್ನಿಸಿದೆ. ಈ ಇಡೀ ಭೀಕರ ಘಟನೆಯ ದೃಶ್ಯಗಳು ಸಮೀಪದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿವೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

























