ಪಾಠ ಕೇಳುತ್ತಿದ್ದ ಬಾಲಕ, ಹಸು ಮೇಯಿಸುತ್ತಿದ್ದ ಯುವಕ, ಕಾಲೇಜು ವಿದ್ಯಾರ್ಥಿ ಹೃದಯಾಘಾತಕ್ಕೆ ಬಲಿ!

heart attack
09/07/2025

ಬೆಂಗಳೂರು(Mahanayaka):  ರಾಜ್ಯದಲ್ಲಿ ಹೃದಯಾಘಾತ ಪ್ರಕರಣ ಮತ್ತೆ ಮುಂದುವರಿದಿದ್ದು, ಇಂದು ಚಾಮರಾಜನಗರ, ದಾವಣಗೆರೆ ಹಾಗೂ ರಾಮನಗರದಲ್ಲಿ ಒಂದೊಂದು ಪ್ರಕರಣಗಳು ವರದಿಯಾಗಿವೆ.

ಪಾಠ ಕೇಳುತ್ತಿದ್ದ ವೇಳೆಯೇ ಹೃದಯಾಘಾತ:   ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಕುರಬಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ಪಾಠ ಕೇಳುತ್ತಿದ್ದ ವೇಳೆಯೇ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ  ನಡೆದಿದೆ.

ದೊಡ್ಡಹುಂಡಿ ಗ್ರಾಮದ ಲೇ.ನಾಗರಾಜು–ನಾಗರತ್ನ ಪುತ್ರ ಮನೋಜ್ ಕುಮಾರ್ (10) ಮೃತ ವಿದ್ಯಾರ್ಥಿಯಾಗಿದ್ದಾನೆ.  ಹೃದಯಾಘಾತದಿಂದ ಕುಸಿದು ಬಿದ್ದಿದ್ದ ಬಾಲಕನನ್ನು, ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಗಿದೆ. ಈ ವೇಳೆ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾನೆ.  ಮೃತ ವಿದ್ಯಾರ್ಥಿ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದ ಎಂದು ತಿಳಿದು ಬಂದಿದೆ.

ಕಾಲೇಜು ವಿದ್ಯಾರ್ಥಿ ಹೃದಯಾಘಾತಕ್ಕೆ ಬಲಿ:  ದಾವಣಗೆರೆಯ ಜಯನಗರದಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಮೃತಪಟ್ಟ ಯುವಕನನ್ನು ಉದ್ಯಮಿ ರೇಖಾ ಮುರ್ಗೇಶ್ ಪುತ್ರ ಅಕ್ಷಯ್ (22) ಎಂದು ಗುರುತಿಸಲಾಗಿದೆ.

ಅಕ್ಷಯ್ ಗೆ ಎದೆನೋವು ಕಾಣಿಸಿಕೊಂಡ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಗೆ ತಲುಪಿ ಕೆಲವು ಕ್ಷಣಗಳಲ್ಲೇ ಅಕ್ಷಯ್ ಕೊನೆಯುಸಿರೆಳೆದಿದ್ದಾರೆ. ವರದಿಗಳ ಪ್ರಕಾರ ಕಳೆದ 3 ತಿಂಗಳುಗಳಲ್ಲಿ ದಾವಣಗೆರೆ ಜಿಲ್ಲಾ ಆಸ್ಪತ್ರೆವೊಂದರಲ್ಲೇ 75ಕ್ಕೂ ಹೆಚ್ಚು ಜನ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಹಸು ಮೇಯಿಸುತ್ತಿದ್ದ ಯುವಕ ಹೃದಯಾಘಾತಕ್ಕೆ ಬಲಿ:  ರಾಮನಗರ ಜಿಲ್ಲೆಯ ರಾಮನಗರ ತಾಲೂಕಿನ ಗೊಲ್ಲರದೊಡ್ಡಿ ಗ್ರಾಮದಲ್ಲಿ  ಹಸುವನ್ನು ಮೇಯಿಸುತ್ತಿದ್ದ ಯುವಕನೊಬ್ಬ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.

ಗಿರೀಶ್ (25) ಹೃದಯಾಘಾತದಿಂದ ಸಾವನ್ನಪ್ಪಿದ ಯುವಕ. ಕೂಲಿ ಕೆಲಸ ಮಾಡಿಕೊಂಡಿದ್ದ ಯುವಕ ಗಿರೀಶ್, ಇಂದು ಮಧ್ಯಾಹ್ನ ಹಸು ಮೇಯಿಸುವಾಗ ಎದೆನೋವು ಕಾಣಿಸಿಕೊಂಡು ಜಮೀನಿನ ಬಳಿಯೇ ಕುಸಿದು ಬಿದ್ದಿದ್ದಾನೆ. ಕೂಡಲೇ ಸ್ಥಳೀಯರು ಗಮನಿಸಿ ಆಸ್ಪತ್ರೆಗೆ ದಾಖಲಿಸಿದ ವೇಳೆ ಯುವಕ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಮೃತ ಗಿರೀಶ್ ಗೆ ಯಾವುದೇ ದುಷ್ಚಟಗಳು ಇರಲಿಲ್ಲ ಆದರೂ ಹೃದಯಾಘಾತದಿಂದ ಸಾವನ್ನಪ್ಪಿರೋದು ಆತಂಕಕ್ಕೆ ಕಾರಣವಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version