ಭಕ್ತಿಗೆ ಬಡತನವಿಲ್ಲವೆಂದು ತೋರಿಸಿಕೊಟ್ಟ ಪುಟ್ಟ ಬಾಲಕ

moodigere
10/09/2024

ಕೊಟ್ಟಿಗೆಹಾರ: ಮೂಡಿಗೆರೆ  ತಾಲೂಕಿನ ತಳವಾರ ಗ್ರಾಮದ ರುದ್ರಪ್ಪಗೌಡ ಎಂಬುವರ ಕೂಲಿ ಲೈನ್‌ ನಲ್ಲಿರುವ 11 ವರ್ಷದ ಅಶ್ವತ್ ಎಂಬ ಬಾಲಕ ಯಾವುದೇ ಖರ್ಚಿಲ್ಲದೇ ಪ್ರಕೃತಿಯಲ್ಲಿ ಸಿಗುವ ವಸ್ತುಗಳ ಬಳಕೆ ಮಾಡಿಕೊಂಡು ಗಣೇಶ ಹಬ್ಬದ ದಿನ ಗಣಪತಿ ಪ್ರತಿಷ್ಠಾಪಿಸಿ ಸೋಮವಾರ ಸಂಜೆ ವಿಸರ್ಜಿಸುವ ಮೂಲಕ ಭಕ್ತಿಗೆ ಬಡತನವಿಲ್ಲವೆಂಬುದು ಈ ಘಟನೆ ಸಾಕ್ಷಿಯಾಗಿದೆ.

ಈ ಬಾಲಕ ಕೂಲಿ ಲೈನ್ ಇರುವ ರಸ್ತೆಯ ತಂತಿ ಬೇಲಿ ಪಕ್ಕದಲ್ಲಿ ಅಡಿಕೆ ಗಿಡದ ಬುಡಕ್ಕೆ ಹಾಕಲು ಟ್ರಾಕ್ಟರ್‌ ನಲ್ಲಿ ತಂದು ಸುರಿದಿದ್ದ ಮಣ್ಣಿನ ದಿಬ್ಬದ ಮೇಲೆ ಕಾಫಿ ಕೊಯ್ಯುವ ಟಾರ್ಪಲ್ ಬಳಸಿ ಗುಡಿ ನಿರ್ಮಿಸಿದ್ದಾನೆ. ಅಲ್ಲದೇ ಅದೇ ಮಣ್ಣನ್ನು ಬಳಕೆ ಮಾಡಿಕೊಂಡು ಸ್ವತಃ ತಾನೇ ಗಣಪತಿ ವಿಗ್ರಹ ನಿರ್ಮಿಸಿ, ವಿಗ್ರಹವನ್ನು ಮರದ ದಿಬ್ಬಿನ ಮೇಲೆ ಕುಳ್ಳಿರಿಸಿ ಗಣೇಶ ಹಬ್ಬದ ದಿನ ಪ್ರತಿಷ್ಠಾಪಿಸಿದ್ದಾನೆ.

ಗಣಪತಿಗೆ ಪೂಜೆ ಸಲ್ಲಿಸಲು ಸ್ಥಳೀಯವಾಗಿ ಸಿಗುವ ಮಾವು, ಹಲಸು, ಗಾಳಿ ಮರದ ಸೊಪ್ಪುಗಳಿಂದ ಅಲಂಕರಿಸಿ, ದಾಸವಾಳ, ಮಲ್ಲಿಗೆ, ನೊಜ್ಜೆ ಗಿಡ ಹೂವಿನಿಂದ ಹಾಗೂ ರಂಗೋಲಿ ಬಿಡಿಸಿ ಸಿಂಗರಿಸಲಾಗಿದೆ.  ಸೀಬೆಹಣ್ಣು, ಗರ್ಜೆಕಾಯಿ, ತೆಂಗಿನಕಾಯಿ ನೈವೇದ್ಯಕ್ಕಿಟ್ಟು 3 ದಿನ ಪೂಜಾ ಕಾರ್ಯ ನಡೆಸಿದ್ದಾನೆ.

ನಂತರ ಪಲ್ಲಕ್ಕಿ ರೀತಿಯ ಅಡ್ಡೆಯನ್ನು ತಯಾರಿಸಿ ಅದರಲ್ಲಿ ಗಣಪತಿ ವಿಗ್ರಹ ಕೂರಿಸಿ, ತನ್ನ ಸಹಪಾಟಿ ಮಕ್ಕಳೊಂದಿಗೆ ಮೆರವಣಿಗೆ ಮೂಲಕ ಪಕ್ಕದ ದೊಡ್ಡಳ್ಳದಲ್ಲಿ ವಿಸರ್ಜನೆ ಮಾಡಲಾಯಿತು. ಈ ಬಾಲಕನ ಭಕ್ತಿಗೆ ತೋಟದ ಮಾಲೀಕರು ಮತ್ತು ಗ್ರಾಮಾಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version