ಶಿಕ್ಷಣ ಪಡೆಯುವುದೊಂದೇ ಮಹಿಳೆಯರೆಲ್ಲರ ಮುಕ್ತಿ ಮಾರ್ಗವಾಗಿದೆ: ಕವಿಯತ್ರಿ ಪಲ್ಲವಿ ಕಾಂಬಳೆ

ಚಿಕ್ಕೋಡಿ: “ಪ್ರಸ್ತುತ ಪರಿಸ್ಥಿತಿಯಲ್ಲಿ ಮಹಿಳೆಯರು ಒಂದಾಗಬೇಕು ಮುಂದಾಗಬೇಕು ಆವಾಗಲೇ ದೇಶದ ಅಭಿವೃದ್ಧಿ ಆಗಲು ಸಾಧ್ಯವಿದೆ. ಮಹಿಳೆಯರೆಲ್ಲಾ ಮುಂದಾಗಬೇಕಾದರೆ ಶಿಕ್ಷಣ ಪಡೆಯಬೇಕು. ಶಿಕ್ಷಣ ಪಡೆಯುವುದೊಂದೇ ಮಹಿಳೆಯರೆಲ್ಲರ ಮುಕ್ತಿ ಮಾರ್ಗವಾಗಿದೆ. ” ಎಂದು ಯುವ ಕವಿಯತ್ರಿ ಕುಮಾರಿ ಪಲ್ಲವಿ ಕಾಂಬಳೆ ಹೇಳಿದರು
ಅವರು ಇಂದು ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಮನರೇಗಾ ಕೆಲಸ ಮಾಡುತ್ತಿರುವ ಮಹಿಳಾ ಕೂಲಿಕಾರರು ಹಮ್ಮಿಕೊಂಡಿದ್ದ “ವಿಶ್ವ ಮಹಿಳಾ ದಿನಾಚರಣೆ” ಅಂಗವಾಗಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪಲ್ಲವಿ ಕಾಂಬಳೆ ರವರು ಮಾತನಾಡುತ್ತ “ಮಹಿಳೆಯರ ಹಕ್ಕುಗಳ ಅರಿವಿನ ದಿನವೇ ಮಹಿಳಾ ದಿನ. ಮಹಿಳೆಯರಾದ ನಾವೆಲ್ಲಾ ಈ ದಿನವನ್ನು ಸಂಭ್ರಮಿಸಬೇಕು. ಮಾತೆ ಸಾವಿತ್ರಿಬಾಯಿ ಫುಲೆ ರವರು ಕೊಟ್ಟ ಶಿಕ್ಷಣ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರವರು ಬರೆದ ಸಂವಿಧಾನದಿಂದಾಗಿ ನಾವುಗಳು ಕಲಿಯುತ್ತಿದ್ದೇವೆ ಮೀಸಲಾತಿಯನ್ನು ಅನುಭವಿಸುತ್ತಿದ್ದೇವೆ. ಒಂದು ಹೊತ್ತಿನ ಊಟ ಕಡಿಮೆ ಮಾಡೋಣ. ಆದರೆ ನಮ್ಮ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡೋಣ. ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರಿಂದ ನಮ್ಮ ನಮ್ಮ ಕುಟುಂಬಗಳಿಂದ ಹಿಡಿದು ದೇಶವೇ ಸುಧಾರಣೆ ಆಗುತ್ತದೆ. ಪ್ರತಿಯೊಂದು ಮಹಿಳೆಯಲ್ಲೂ ಒಂದೊಂದು ಪ್ರತಿಭೆ ಇರುತ್ತದೆ ಆ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ನಮ್ಮ ಗ್ರಾಮೀಣ ಭಾಗದಲ್ಲಿ ಹೆಣ್ಣು ಮಕ್ಕಳು ಉತ್ತಮ ಅಂಕ ಪಡೆದರೂ ಮತ್ತೆ ಅವಳು ಮುಸುರೆ ತಿಕ್ಕಬೇಕಾಗುತ್ತಿದೆ. ಗಂಡು ಮಕ್ಕಳು ಎಷ್ಟೇ ದಡ್ಡರಿದ್ದರೂ ಅವರಿಗೆ ಕಲಿಯುವ ಅವಕಾಶ ನೀಡಲಾಗುತ್ತಿದೆ. ಈ ರೀತಿಯ ತಾರತಮ್ಯವನ್ನು ನಿಷೇಧಿಸಬೇಕು. ಹೆಣ್ಣು ಮಕ್ಕಳು ದುರ್ಬಲರಲ್ಲ ಅವರೂ ಕೂಡ ಸಬಲರಾಗಿದ್ದಾರೆ ಎಂದು ನಾವು ಮಹಿಳೆಯರು ಈಗಾಗಲೇ ಸಾಧಿಸಿ ತೋರಿಸಿದ್ದೇವೆ. ಮಹಿಳೆಯರು ಸರ್ಕಾರಿ ಸೌಲಭ್ಯಗಳನ್ನು ಬಳಸಿಕೊಂಡು ಸ್ವಂತ ಬಲದಿಂದ ಮೇಲೆಳಬೇಕು” ಎಂದು ಹೇಳಿದರು.
ಪ್ರಾಸ್ತಾವಿಕ ಮಾತನಾಡಿದ ಕು. ಮೇಘಾ ಇಂಗಳೆ, “ಕೆಲವು ಮಹಿಳೆಯರು ತಮಗಿರುವ ಸಮಸ್ಯೆಗಳನ್ನು ಮೆಟ್ಟಿ ನಿಂತು ಬಹುತೇಕ ರಂಗಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಗ್ರಾಮೀಣ ಭಾಗದ ಮಹಿಳೆಯರು ಕೂಡ ಈ ಪುರುಷ ಪ್ರಧಾನ ಸಮಾಜದ ದೌರ್ಜನ್ಯ, ದಬ್ಬಾಳಿಕೆ, ಹಿಂಸೆಯಂತಹ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಿ ಮುಂದೆ ಬರಬೇಕು. ಸುಖದುಃಖಗಳನ್ನು ಒಂದು ಕಡೆಗೆ ಕುಳಿತು ಮಾತನಾಡಬೇಕು ಎನ್ನುವ ದೃಷ್ಟಿಯಿಂದ ನಾವು ಇಲ್ಲಿ ಮಹಿಳಾ ದಿನಾಚರಣೆ ಆಚರಿಸುತ್ತಿದ್ದೇವೆ” ಎಂದರು.
ಭೂಮ್ತಾಯಿ ಕೃಷಿ ಮಹಿಳಾ ಕೂಲಿಕಾರರ ಸಂಘಟನೆ ಮುಖ್ಯಸ್ಥೆ ಲಕ್ಷ್ಮೀ ಕಾಂಬಳೆ “ಇಂತಹ ದಿನದಂದು ನಾವೆಲ್ಲಾ ನಮಗಾಗಿ ಒಗ್ಗಟ್ಟಾಗಿದ್ದೇವೆ ಎನ್ನುವುದೇ ನಮಗೆಲ್ಲ ಖುಷಿ ಮತ್ತು ಅಭಿಮಾನದ ವಿಷಯ. ಇಂತಹ ದಿನಗಳನ್ನು ನಾವು ಮುಂದೆಯೂ ಸಂಭ್ರಮಿಸೋಣ” ಎಂದು ಶುಭಾಶಯ ಕೋರಿದರು.
ಇದೇ ವೇಳೆ ಸಂಘಟನೆ ಸದಸ್ಯರು ವಿನಯಶ್ರೀ ಶಿಂಗೆ “ಡಾ.ಬಿ. ಆರ್. ಅಂಬೇಡ್ಕರ್ ರವರು ನೀಡಿದ ಹಕ್ಕುಗಳಿಂದ ನಾವು ಮನೆಯಿಂದ ಹೊರಗೆ ಬಂದು ದುಡಿಯುತ್ತಿದ್ದೇವೆ. ಇಲ್ಲಿ ನಾವು ಬೇರೆ ಬೇರೆ ಜಾತಿಗಳಿಗೆ ಸೇರಿದ್ದರೂ ಮಹಿಳೆಯರಾಗಿ ನಾವು ಇಲ್ಲಿ ಒಂದೇ ಎಂದು ದುಡಿಯುತ್ತಿದ್ದೇವೆ” ಎಂದರು.
ಕು. ಚಂದ್ರಿಕಾ ಶಿಂಗೆ ರವರು ಗುಲಾಬಿ ಗ್ಯಾಂಗ್ ಮಹಿಳಾ ಸಂಘಟನೆ ಹಿನ್ನೆಲೆ ತಿಳಿಸಿದರು. ಈ ಸಂದರ್ಭದಲ್ಲಿ 2023-24 ನೇ ಸಾಲಿನಲ್ಲಿ ಮನರೇಗಾ ಕೆಲಸದಲ್ಲಿ 100 ದಿನಗಳನ್ನು ಪೂರೈಸಿದ ಮಹಿಳೆಯರನ್ನು ಮತ್ತು ಹಿರಿಯ ಮಹಿಳಾ ಕೂಲಿಕಾರರನ್ನು ಗೌರವಿಸಲಾಯಿತು.
ಈ ವೇಳೆ ಅಂಬೇಡ್ಕರವಾದಿ ಯುವ ಪಡೆಯ ಸತೀಶ ಶಾಸ್ತ್ರೀ ಮತ್ತು ಯೋಗೇಶ್ ಶಿಂಧೆ, ಆ್ಯಕ್ಷನ್ ಎಡ್ ಅಸೋಸಿಯೇಷನ್ ಕಾರ್ಯಕರ್ತರು ಮಹೇಶ ಶಿಂಗೆ, ಮನರೇಗಾ ಕಾಯಕ ಬಂಧುಗಳಾದ ಚೇತನ ಗಾವಡೆ ಮತ್ತು ಮೋಹನ ಐವಳ್ಳಿ ಮತ್ತು ಭೂಮ್ತಾಯಿ ಮಹಿಳಾ ಕೃಷಿ ಕೂಲಿಕಾರರ ಸಂಘಟನೆ ಸದಸ್ಯರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಮಹಿಳಾ ಕೂಲಿಕಾರರಾದ ಶಾಂತಾಬಾಯಿ ಕದಮ ವಹಿಸಿದ್ದರು. ನಿಕೀತಾ ಶಾಸ್ತ್ರೀ ನಿರೂಪಿಸಿದರು. ರಾಧಿಕಾ ಕಾಂಬಳೆ ವಂದಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth