ಮಡದಿ ಜೊತೆ ಮುನಿಸಿಕೊಂಡು ಮನೆ ಬಿಟ್ಟಿದ್ದ ತಾತಾ 10 ವರ್ಷಗಳ ನಂತರ ಭಿಕ್ಷುಕನಾಗಿ ಪತ್ತೆ: ಮೂಟೆಯಲ್ಲಿ ಇದ್ದ ಹಣ ಎಷ್ಟು ಗೊತ್ತಾ?

tumakuru
18/10/2023

ತುಮಕೂರು: ಜಿಲ್ಲೆಯ ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಸಿದ್ದರಬೆಟ್ಟ ಗ್ರಾಪಂ ವ್ಯಾಪ್ತಿಯ ಮರೇನಾಯಕನಹಳ್ಳಿ ಗ್ರಾಮದ ತಂಗುದಾಣದ ಸಮೀಪ ಭಿಕ್ಷುಕನ ಬಳಿ ಸಾವಿರಾರು ರೂಪಾಯಿ ಹಣ ಪತ್ತೆಯಾಗಿರುವುದು ಅಚ್ಚರಿ ಮೂಡಿಸಿದೆ.

ಮೂಟೆಯಲ್ಲಿ ಗಾಂಜಾ ಸೊಪ್ಪಿನ ಶಂಕೆ:

ತಂಗುದಾಣದ ಬಳಿ ಗುರುಸಿದ್ದಪ್ಪನ ವರ್ತನೆ ಮತ್ತು ಹಳೆಯ ಚೀಲದಲ್ಲಿ ಗಾಂಜಾಸೊಪ್ಪು ಇರುವುದಾಗಿ ಶಂಕಿಸಿ ಎಎಸೈ ಹನುಮಂತರಾಯಪ್ಪ ಮತ್ತು ಮುಖ್ಯಪೇದೆ ರಾಮಕೃಷ್ಣಯ್ಯ ವಿಚಾರಣೆ ನಡೆಸಿದ್ದರು. ಈ ವೇಳೆ ಭಿಕ್ಷುಕನ ಮೂಟೆಯಲ್ಲಿ 50 ಸಾವಿರಕ್ಕೂ ಅಧಿಕ ಚಿಲ್ಲರೇ ಹಣ ನೋಡಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಸಿದ್ದರಬೆಟ್ಟದ ತಪ್ಪಲಿನಲ್ಲೇ ಇರುವ ತಂಗುದಾಣ ಮತ್ತು ರಸ್ತೆಬದಿಯ ಮರದ ಕೆಳಗಡೆ ಕಳೆದ ವಾರದಿಂದ ಕೊಳಕು ಹರಿದ ಬಟ್ಟೆಯಲ್ಲಿಯೇ ಗುರುಸಿದ್ದಪ್ಪ ತನ್ನ ಚೀಲದೊಂದಿಗೆ ವಾಸವಿದ್ದನು. ಈತ ಎಲ್ಲಿಗೆ ಹೋದ್ರು ಹಳೆಯ ಚೀಲವನ್ನು ಜೊತೆಯಲ್ಲೇ ಕೊಂಡೊಯ್ಯುತ್ತಿದ್ದ. ಸ್ಥಳೀಯರಿಗೆ ವೃದ್ದನ ಮೇಲೆ ಅನುಮಾನ ಬಂದು ಚೀಲದಲ್ಲಿ ಗಾಂಜಾದ ಸೋಪ್ಪು ಇದೆ ಎಂದು ಶಂಕಿಸಿ 112ಕ್ಕೆ ದೂರವಾಣಿ ಕರೆ ಮಾಡಿದ್ದರು. ಪೊಲೀಸರಿಗೆ ಮಾಹಿತಿ ಲಭ್ಯವಾಗಿ ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಂದಿದೆ.

ಚೀಲದಲ್ಲಿ 50 ಸಾವಿರ ಚಿಲ್ಲರೆ ಹಣ ಪತ್ತೆ:

ಗುರುಸಿದ್ದಪ್ಪನ ಬಳಿಯಿದ್ದ ಹಳೆಯ ಚೀಲವನ್ನು ಪೊಲೀಸರು ಪರಿಶೀಲಿಸಿದಾಗ 20 ಸಾವಿರಕ್ಕೂ ಅಧಿಕ ಚಿಲ್ಲರೇ ನಾಣ್ಯ ಮತ್ತು 38 ಸಾವಿರಕ್ಕೂ ಅಧಿಕ 50, 20 ಮತ್ತು 10ರೂ ಮುಖಬೆಲೆಯ ನೋಟುಗಳು ಪತ್ತೆಯಾಗಿವೆ. ಪೊಲೀಸರು ಸ್ಥಳೀಯರ ಸಹಾಯದಿಂದ ಚೀಲವನ್ನು ತೆರೆದು ಹರಿದುಹೋಗಿದ್ದ ಹಳೆಯ ನೋಟುಗಳೆನೆಲ್ಲ ಜೋಡಿಸಿದ್ದಾರೆ.

10 ವರ್ಷ ಹಿಂದೆ ಕಾಣೆಯಾಗಿದ್ದ ವೃದ್ಧ:

ಗುಬ್ಬಿ ತಾಲೂಕು ಚೇಳೂರು ಹೋಬಳಿ ಎಂ.ಹೆಚ್.ಪಟ್ನಾ ಗ್ರಾಪಂ ವ್ಯಾಪ್ತಿಯ ಮಾದಾಪುರ ಗ್ರಾಮದ ಗುರುಸಿದ್ದಪ್ಪ ತನ್ನ ಮಡದಿಯ ಜೊತೆ ಕ್ಷುಲ್ಲಕ ಕಾರಣಕ್ಕಾಗಿ ಜಗಳ ಮಾಡಿಕೊಂಡು ಕಳೆದ 10ವರ್ಷದ ಹಿಂದೆ ಮನೆಬಿಟ್ಟಿದ್ದನು. ತುಮಕೂರು, ಗುಬ್ಬಿ, ದೇವರಾಯನದುರ್ಗ, ಮಧುಗಿರಿ, ಪಾವಗಡ, ಕೊರಟಗೆರೆ, ಸಿದ್ದರಬೆಟ್ಟ ಸೇರಿದಂತೆ ಹತ್ತಾರು ಕಡೆ ಭಿಕ್ಷೆಬೇಡುತ್ತಾ ಜೀವನ ಸಾಗಿಸುತ್ತಿದ್ದನು.

ಇದೀಗ ಗುರುಸಿದ್ದಪ್ಪ ಪೊಲೀಸರ ಕರ್ತವ್ಯ ನಿಷ್ಠೆಯಿಂದ ಮತ್ತೇ ಮರಳಿ ಗೂಡಿಗೆ ಸೇರಿಕೊಂಡಿದ್ದಾನೆ. ಪಿಎಸೈ ಸೂಚನೆಯ ಮೇರೆಗೆ ಭಿಕ್ಷುನ ವಿಳಾಸ ಪತ್ತೇ ಹಚ್ಚಿದ ಪೊಲೀಸರ ತಂಡ ಗುರುಸಿದ್ದಪ್ಪನ ಮಡದಿ ಮಂಗಳಮ್ಮ ಮತ್ತು ಮಗ ಪ್ರವೀಣ್‌ರನ್ನ ಸ್ಥಳಕ್ಕೆ ಕರೆಯಿಸಿಕೊಂಡು 50 ಸಾವಿರಕ್ಕೂ ಅಧಿಕ ಚಿಲ್ಲರೇ ಹಣದ ಚೀಲವನ್ನು ಹಸ್ತಾಂತರ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಇತ್ತೀಚಿನ ಸುದ್ದಿ

Exit mobile version