ಬೆಂಕಿ ಅವಗಡ: ಜೀವ ಉಳಿಸಿಕೊಳ್ಳಲು 4 ಅಂತಸ್ತಿನ ಕಟ್ಟಡದಿಂದ ಜಿಗಿದ ವ್ಯಕ್ತಿಯ ಸ್ಥಿತಿ ಚಿಂತಾಜನಕ

ಬೆಂಗಳೂರು: ನಗರದ ಕೋರಮಂಗಲದ ಪಬ್‌ವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಜೀವ ಉಳಿಸಿಕೊಳ್ಳಲು ವ್ಯಕ್ತಿಯೋರ್ವ ಮಹಡಿಯಿಂದ ಜಿಗಿದಿರುವ ಘಟನೆ ಜರುಗಿದೆ.
ಕೋರಮಂಗಲದ 4 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ವ್ಯಕ್ತಿಯೊಬ್ಬ ಜೀವ ಉಳಿಸಿಕೊಳ್ಳಲು ಕಟ್ಟಡದ ಟೆರಿಸ್‌ನಿಂದ ಜಿಗಿದಿರುವ ಆಘಾತಕಾರಿ ಘಟನೆ ನಡೆದಿದೆ.
ಕೋರಮಂಗಲದ ಮಡ್ ಪೈಪ್ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡು ಧಗಧಗನೆ ಉರಿದಿದೆ. ಈ ವೇಳೆ ತಪ್ಪಿಸಿಕೊಳ್ಳಲು ವ್ಯಕ್ತಿಯೊಬ್ಬ ಕೊನೆಯ ಮಹಡಿಯಿಂದ ಕೆಳಗೆ ಜಿಗಿದಿದ್ದು,ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದೆ.
ಕಟ್ಟಡದ ಮೇಲ್ಬಾಗದಲ್ಲಿ 5-6 ಸಿಲಿಂಡರ್ ಗಳನ್ನು ಇಡಲಾಗಿತ್ತು ಎನ್ನಲಾಗಿದೆ. ಸಿಲಿಂಡರ್ ಬ್ಲಾಸ್ಟ್ ನಿಂದ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಬಿಲ್ಡಿಂಗ್ ನ ಮೇಲೆ ಇರುವ ಮಳಿಗೆ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಬಿಲ್ಡಿಂಗ್ ಹತ್ತಿರವೂ ಸುಳಿಯಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯರು ಅಕ್ಕ-ಪಕ್ಕದ ಬಿಲ್ಡಿಂಗ್ ಗೆ ಬೆಂಕಿ ಆವರಿಸುವ ಆತಂಕದಲ್ಲಿದ್ದಾರೆನ್ನಲಾಗಿದೆ.
ಅಗ್ನಿ ಅವಘಡವಾದ ಬಳಿಕ 6 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿವೆ. ಬೆಂಕಿ ನಿಯಂತ್ರಿಸಲು ಅಗ್ನಿಶಾಮಕ ದಳದವರು ಹರಸಾಹಸಪಡುತ್ತಿದ್ದಾರೆ.ಹೀಗಾಗಿ ಅಕ್ಕಪಕ್ಕದವರನ್ನು ತೆರವು ಮಾಡಲಾಗಿದೆನ್ನಲಾಗಿದೆ.
ಇದನ್ನೂ ಓದಿ:
ಮತ್ತೊಂದು ಪಟಾಕಿ ದುರಂತ: 9 ಮಂದಿ ಸಜೀವ ದಹನ, ಹಲವರಿಗೆ ಗಾಯ