ಅನ್ನಭಾಗ್ಯದ ಇಂದಿರಾ ಆಹಾರ ಕಿಟ್ ಟೆಂಡರ್ ರದ್ದು: ನೂತನ ಮಾದರಿಯ ರೂಪರೇಷೆಗೆ ರಾಜ್ಯ ಸರ್ಕಾರ ನಿರ್ಧಾರ
ಬೆಂಗಳೂರು: ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಡಿಯಲ್ಲಿ ನೀಡಲು ಉದ್ದೇಶಿಸಲಾಗಿದ್ದ ‘ಇಂದಿರಾ ಆಹಾರ ಕಿಟ್’ ವಿತರಣೆಯ ಹಾಲಿ ಟೆಂಡರ್ ಪ್ರಕ್ರಿಯೆಯನ್ನು ಸರ್ಕಾರ ರದ್ದುಗೊಳಿಸಿದೆ.
ಕಿಟ್ ಖರೀದಿ ಹಾಗೂ ಪೂರೈಕೆ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕ ಹಾಗೂ ದಕ್ಷಗೊಳಿಸುವ ನಿಟ್ಟಿನಲ್ಲಿ ನೂತನ ಮಾದರಿಯನ್ನು ರೂಪಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತೀರ್ಮಾನಿಸಿದೆ. ಮುಂದಿನ ಸುಮಾರು 45 ದಿನಗಳ ಅವಧಿಯಲ್ಲಿ ಪರಿಷ್ಕೃತ ಯೋಜನೆಯನ್ನು ಸಿದ್ಧಪಡಿಸಿ ಜಾರಿಗೆ ತರಲಾಗುವುದು ಎಂದು ಆಹಾರ ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.
ಇಲಾಖೆಯು ನಡೆಸಿದ ಕ್ಷೇತ್ರಮಟ್ಟದ ಪರಿಶೀಲನೆ ಹಾಗೂ ಮುಖ್ಯವಾಗಿ ಮಹಿಳಾ ಫಲಾನುಭವಿಗಳ ನಡುವೆ ನಡೆಸಿದ ಸಮೀಕ್ಷೆಯ ಆಧಾರದ ಮೇಲೆ ಈ ಮಹತ್ವದ ನಿರ್ಧಾರ ತಳೆಯಲಾಗಿದೆ. ಬರಿ ಅಕ್ಕಿಯನ್ನೇ ನೀಡುವ ಬದಲು ದಿನನಿತ್ಯದ ಅಡುಗೆಗೆ ಅಗತ್ಯವಿರುವ ತೊಗರಿಬೇಳೆ, ಸಕ್ಕರೆ, ಉಪ್ಪು ಹಾಗೂ ಅಡುಗೆ ಎಣ್ಣೆಯಂತಹ ಉತ್ತಮ ಗುಣಮಟ್ಟದ ವೈವಿಧ್ಯಮಯ ಆಹಾರ ಪದಾರ್ಥಗಳನ್ನು ನೀಡಿದರೆ ಕುಟುಂಬಗಳಿಗೆ ಹೆಚ್ಚಿನ ನೆರವಾಗಲಿದೆ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ. ಹೀಗಾಗಿ ಕಿಟ್ಗೆ ಸೇರ್ಪಡೆಗೊಳಿಸಬೇಕಾದ ಸಾಮಗ್ರಿಗಳು ಮತ್ತು ಅವು ತಲುಪುವ ಪೂರೈಕೆ ಸರಪಳಿಯನ್ನು ಇಲಾಖೆಯು ಮರುಪರಿಶೀಲಿಸುತ್ತಿದೆ.
ಆಹಾರ ಕಿಟ್ ಗಳ ವಿತರಣೆಯಲ್ಲಿ ಅಕ್ರಮ ಹಾಗೂ ಸೋರಿಕೆಯನ್ನು ತಡೆಯಲು ರಾಜ್ಯಮಟ್ಟದ ಏಕೈಕ ಟೆಂಡರ್ ವ್ಯವಸ್ಥೆಯ ಬದಲಾಗಿ ಜಿಲ್ಲಾಮಟ್ಟದ ವಿಕೇಂದ್ರೀಕೃತ ಟೆಂಡರ್ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಲು ಸರ್ಕಾರ ಯೋಚಿಸುತ್ತಿದೆ. ಜಿಲ್ಲಾಮಟ್ಟದಲ್ಲಿ ಸರಕುಗಳ ಸಂಗ್ರಹಣೆ ಮಾಡುವುದರಿಂದ ವಸ್ತುಗಳು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಲಿವೆ ಎಂದು ರಾಜ್ಯ ಖಾತರಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ತಿಳಿಸಿದ್ದಾರೆ. ಇದಲ್ಲದೆ, ಬೃಹತ್ ಪ್ರಮಾಣದ ಖರೀದಿ ಮತ್ತು ವಿತರಣೆಯ ಪ್ರಾಯೋಗಿಕ ಸವಾಲುಗಳನ್ನು ಎದುರಿಸಲು ಫಲಾನುಭವಿಗಳಿಗೆ ‘ಇ-ವೋಚರ್’ ನೀಡುವ ಪರ್ಯಾಯ ವ್ಯವಸ್ಥೆಯ ಕುರಿತಾಗಿಯೂ ಚರ್ಚೆಗಳು ನಡೆಯುತ್ತಿದ್ದು, ಇನ್ನೂ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ.
ಪರಿಷ್ಕೃತ ಇಂದಿರಾ ಆಹಾರ ಕಿಟ್ ಯೋಜನೆ ಸಂಪೂರ್ಣವಾಗಿ ಸಿದ್ಧಗೊಂಡು ಅನುಷ್ಠಾನಕ್ಕೆ ಬರುವವರೆಗೆ, ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡ್ದಾರರಿಗೆ ನೀಡಲಾಗುತ್ತಿರುವ ಹೆಚ್ಚುವರಿ 5 ಕೆಜಿ ಅಕ್ಕಿ ವಿತರಣೆಯನ್ನು ಯಾವುದೇ ವ್ಯತ್ಯಯವಿಲ್ಲದೆ ಮುಂದುವರಿಸಲು ಸರ್ಕಾರ ನಿರ್ಧರಿಸಿದೆ.

























