ಪಕ್ಷದ ಘನತೆಗೆ ಧಕ್ಕೆ ತರುವ ಚಟುವಟಿಕೆ ಸಹಿಸಲ್ಲ: ಯತ್ನಾಳ್ ಗೆ ಖಡಕ್ ಎಚ್ಚರಿಕೆ

ಬೆಂಗಳೂರು: ಪಕ್ಷದ ಘನತೆಗೆ ಧಕ್ಕೆ ತರುವ ಯಾವುದೇ ಚಟುವಟಿಕೆಗಳನ್ನು ಸಹಿಸುವುದಿಲ್ಲ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ ರಾಜೀವ್ ಬುಧವಾರ ಪರೋಕ್ಷವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ಯತ್ನಾಳ್ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಜೀವ್, ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ನೇತೃತ್ವದಲ್ಲಿ ಇಂದು ನಡೆದ ಕರ್ನಾಟಕ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಪಕ್ಷದಲ್ಲಿನ ಇತ್ತೀಚಿನ ಎಲ್ಲಾ ಬೆಳವಣಿಗೆಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಗಿದೆ ಎಂದು ತಿಳಿಸಿದರು.
ಒಳಗಡೆ ನಡೆದ ಚರ್ಚೆಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಪಕ್ಷದ ಘನತೆಗೆ ಧಕ್ಕೆ ತರುವ ಯಾವುದೇ ಚಟುವಟಿಕೆಗಳನ್ನು ಸಹಿಸುವುದಿಲ್ಲ ಎಂದು ನಾನು ಹೇಳಬಲ್ಲೆ. ನಾಲ್ಕು ಗೋಡೆಗಳ ನಡುವೆ ಗಂಭೀರ ಚರ್ಚೆಗಳು ನಡೆದಿವೆ. ನಮ್ಮ ಕೇಂದ್ರ ನಾಯಕತ್ವವು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ರಾಜೀವ್ ಹೇಳಿದರು.
ಯತ್ನಾಳ್ ಅವರ ಅಶಸ್ತಿನ ವರ್ತನೆ ಬಿಜೆಪಿ ನಾಯಕರಿಗೆ ಮುಜುಗರ ತಂದಿದ್ದು, ಯಾವುದೇ ಕ್ಷಣಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಕಂಡು ಬಂದಿದೆ.
ಇನ್ನೊಂದೆಡೆ ಯತ್ನಾಳ್ ಅವರ ಉಚ್ಛಾಟನೆಯಾದರೆ ಹಿಂದುತ್ವದ ಅಜೆಂಡಾ ಹೊಂದಿರುವ ಬಿಜೆಪಿಯೇತರ ಸಂಘಟನೆಗಳು ಒಂದಾಗಿ ಪ್ರತ್ಯೇಕ ಪಕ್ಷವನ್ನು ಕಟ್ಟಲಿದೆಯೇ ಎನ್ನುವ ಚರ್ಚೆಗಳು ಕೂಡ ಕೇಳಿ ಬಂದಿದೆ.