ಚೇತಕ್ ಬಜಾಜ್‌ ಇ–ಸ್ಕೂಟರ್ ಬ್ಯಾಟರಿ ದೋಷ: ಗ್ರಾಹಕನಿಗೆ ಬಡ್ಡಿ ಸಮೇತ ಹಣ ವಾಪಸ್ ನೀಡಲು ಉಡುಪಿ ಗ್ರಾಹಕರ ನ್ಯಾಯಾಲಯ ಆದೇಶ

bajaj chetak e-scooter
22/09/2026

ಉಡುಪಿ: ಆಂತರಿಕ ಉತ್ಪಾದನಾ ದೋಷವುಳ್ಳ ಎಲೆಕ್ಟ್ರಿಕ್ ಸ್ಕೂಟರ್ ಪೂರೈಕೆ ಹಾಗೂ ಸೇವಾ ನ್ಯೂನತೆ ಎಸಗಿದ ಚೇತಕ್ ಬಜಾಜ್ ಆಟೋ ಕಂಪೆನಿಗೆ ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಮಹತ್ವದ ಆದೇಶ ನೀಡಿದೆ. ದೋಷಪೂರಿತ ವಾಹನ ಪೂರೈಸಿದ್ದಕ್ಕಾಗಿ ಬಾಧಿತ ಗ್ರಾಹಕನಿಗೆ ವಾಹನದ ಸಂಪೂರ್ಣ ಮೊತ್ತವನ್ನು ಶೇಕಡಾ 9 ರಷ್ಟು ಬಡ್ಡಿ ಸಮೇತ ಹಿಂತಿರುಗಿಸುವಂತೆ ಹಾಗೂ ಪರಿಹಾರ ವೆಚ್ಚ ಪಾವತಿಸುವಂತೆ ಆದೇಶಿಸಿದೆ.

ಕಟಪಾಡಿ ಮಣಿಪುರದ ನಿವಾಸಿ ರಿತೀಶ್ ಎಸ್. ಸುವರ್ಣ ಅವರು ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ ಕೆಲವೇ ದಿನಗಳಲ್ಲಿ ವಾಹನದ ಬ್ಯಾಟರಿಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಕಂಪೆನಿಯ ಅಧಿಕೃತ ಸರ್ವೀಸ್ ಸೆಂಟರ್‌ನಲ್ಲಿ ಮೂರು ಸರ್ವೀಸ್‌ಗಳ ಅವಧಿಯಲ್ಲಿ ಒಟ್ಟು ಎರಡು ಬಾರಿ ಬ್ಯಾಟರಿಯನ್ನು ಬದಲಾಯಿಸಲಾಯಿತಾದರೂ ದೋಷ ನಿವಾರಣೆಯಾಗಲಿಲ್ಲ. ಮೂರನೇ ಬಾರಿಯೂ ಬ್ಯಾಟರಿಯಲ್ಲಿ ದೋಷ ಕಂಡುಬಂದಿದ್ದರಿಂದ ತೀವ್ರ ತೊಂದರೆ ಅನುಭವಿಸಿದ ಗ್ರಾಹಕರು ವಕೀಲರ ಮೂಲಕ ನೋಟಿಸ್ ಕಳುಹಿಸಿದರೂ ಕಂಪೆನಿಯಿಂದ ಸೂಕ್ತ ಉತ್ತರ ಸಿಗಲಿಲ್ಲ. ಇದರಿಂದಾಗಿ ರಿತೀಶ್ ಅವರು ಕಂಪೆನಿಯ ವಿರುದ್ಧ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.

ದೂರುದಾರರ ಅರ್ಜಿ, ವಾಹನದ ಸರ್ವೀಸ್ ದಾಖಲೆಗಳು ಹಾಗೂ ಎದುರುದಾರ ಕಂಪೆನಿಯ ಆಕ್ಷೇಪಣೆಗಳನ್ನು ಪರಿಶೀಲಿಸಿದ ನ್ಯಾಯಾಲಯವು, ಸತತ ಎರಡು ಬಾರಿ ಬ್ಯಾಟರಿ ಬದಲಾಯಿಸಿದರೂ ದೋಷ ಸರಿಪಡಿಸಲು ಕಂಪೆನಿ ವಿಫಲವಾಗಿದೆ ಎಂದು ಸ್ಪಷ್ಟಪಡಿಸಿದೆ. ಇದು ವಾಹನದ ಆಂತರಿಕ ಉತ್ಪಾದನಾ ದೋಷ ಮತ್ತು ಸೇವಾ ನ್ಯೂನತೆಯನ್ನು ಸಾಬೀತುಪಡಿಸುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಈ ಹಿನ್ನೆಲೆಯಲ್ಲಿ ವಾಹನದ ಖರೀದಿ ಮೊತ್ತವಾದ ₹1,21,750 ಗಳನ್ನು ಶೇ. 9 ರಷ್ಟು ಬಡ್ಡಿಯೊಂದಿಗೆ ಹಾಗೂ ಪ್ರಕರಣದ ವೆಚ್ಚವಾಗಿ ಹೆಚ್ಚುವರಿ ₹15,000 ಗಳನ್ನು ಆದೇಶ ಪಡೆದ 30 ದಿನಗಳ ಒಳಗಾಗಿ ಗ್ರಾಹಕರಿಗೆ ಪಾವತಿಸಬೇಕೆಂದು ಅಧ್ಯಕ್ಷ ಸುನೀಲ್ ಟಿ. ಮಸರೆಡ್ಡಿ ಹಾಗೂ ಸುಜಾತಾ ಬಿ. ಕೋರಳ್ಳಿ ಅವರನ್ನೊಳಗೊಂಡ ಪೀಠವು ತೀರ್ಪು ನೀಡಿದೆ. ಗ್ರಾಹಕರ ಪರವಾಗಿ ವಕೀಲರಾದ ವಿವೇಕಾನಂದ ಮಲ್ಯ ಹಾಗೂ ಪ್ರವೀಣ್ ಪೂಜಾರಿ ವಾದ ಮಂಡಿಸಿದ್ದರು.

ಇತ್ತೀಚಿನ ಸುದ್ದಿ

deneme bonusu veren siteler gamdom giriş deneme bonusu veren siteler
Exit mobile version