5:39 PM Tuesday 8 - September 2026

ಬೆಳ್ತಂಗಡಿ: ಬಾಲಕ ಸುಮಂತ್ ಮೃತ್ಯು ಪ್ರಕರಣದ ರಹಸ್ಯ ಭೇದಿಸಲು ಕುಟುಂಬಸ್ಥರ ಬ್ರೈನ್ ಮ್ಯಾಪಿಂಗ್ ಪರೀಕ್ಷೆ

sumant case
22/08/2026

ಬೆಳ್ತಂಗಡಿ: ತಾಲೂಕಿನ ಗೇರುಕಟ್ಟೆ ಸಮೀಪದ ಸಂಭೋಳ್ಯದ ಬಾಲಕ ಸುಮಂತ್ (15) ಅವರ ಸಂಶಯಾಸ್ಪದ ಸಾವಿನ ಪ್ರಕರಣದ ನಿಗೂಢತೆ ಹಾಗೂ ಸತ್ಯಾಸತ್ಯತೆಯನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ತನಿಖೆಯನ್ನು ತೀವ್ರಗೊಳಿಸಿದೆ. ನ್ಯಾಯಾಲಯದ ಅನುಮತಿ ಪಡೆದು, ಬೆಂಗಳೂರಿನ ಮಡಿವಾಳದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ (FSL) ಕುಟುಂಬಸ್ಥರ ಬ್ರೈನ್ ಮ್ಯಾಪಿಂಗ್ ಹಾಗೂ ಮಂಪರು ಪರೀಕ್ಷೆ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.

ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದ ಸುಮಂತ್, ಕಳೆದ ಜನವರಿ 14ರಂದು ಬೆಳಗಿನ ಜಾವ ಸಮೀಪದ ದೇವಸ್ಥಾನಕ್ಕೆ ಪೂಜೆಗಾಗಿ ತೆರಳುತ್ತಿದ್ದ ವೇಳೆ ನಿಗೂಢವಾಗಿ ಸಾವನ್ನಪ್ಪಿದ್ದ. ಬಳಿಕ ಆತನ ಶವ ಮನೆ ಸಮೀಪದ ಕೆರೆಯಲ್ಲಿ ಪತ್ತೆಯಾಗಿತ್ತು. ಬಾಲಕನ ಸಾವು ಸಹಜವಲ್ಲ, ಇದೊಂದು ವ್ಯವಸ್ಥಿತ ಹತ್ಯೆ ಎಂದು ಆರಂಭದಿಂದಲೂ ಅನುಮಾನಗಳು ವ್ಯಕ್ತವಾಗಿದ್ದವು. ಪ್ರಕರಣದ ಗಂಭೀರತೆ ಅರಿತು ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ನಡೆಸಿದರೂ ನಿಖರವಾದ ಕಾರಣ ತಿಳಿದುಬಂದಿರಲಿಲ್ಲ. ಹೀಗಾಗಿ ಪ್ರಕರಣವನ್ನು ಇದೀಗ ವೈಜ್ಞಾನಿಕವಾಗಿ ಮುನ್ನಡೆಸಲಾಗಿದೆ.

ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್. ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಕುಟುಂಬದ ಐವರನ್ನು ಈಗಾಗಲೇ ಬೆಂಗಳೂರಿನ ಎಫ್ಎಸ್ಎಲ್ಗೆ ಕರೆದೊಯ್ದು ಮೊದಲ ಹಂತದ ತನಿಖೆ ನಡೆಸಲಾಗಿದೆ.

ಆಗಸ್ಟ್ 10 ರಂದು: ಮೃತ ಸುಮಂತ್ ತಂದೆ ಸುಬ್ರಹ್ಮಣ್ಯ ನಾಯಕ್ ಹಾಗೂ ತಾಯಿ ರತ್ನಾವತಿ ಅವರನ್ನು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಪ್ರಶ್ನಿಸಲಾಗಿದೆ. ಬಳಿಕ ನಿಟ್ಟೆಯಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಸುಮಂತ್ ಸಹೋದರ ಸುದರ್ಶನ್ ಅವರನ್ನು ಮಧ್ಯಾಹ್ನದಿಂದ ಸಂಜೆಯವರೆಗೆ ವಿಚಾರಣೆ ನಡೆಸಲಾಗಿದೆ.

ಆಗಸ್ಟ್ 11 ರಂದು: ಪೆರ್ಲದಲ್ಲಿ ಅರ್ಚಕರಾಗಿರುವ ತಾಯಿ ರತ್ನಾವತಿ ಅವರ ಸಹೋದರ ರಾಧಾಕೃಷ್ಣ ಹಾಗೂ ಕಾಸರಗೋಡಿನ ಸಂಬಂಧಿ ಲಕ್ಷ್ಮೀನಾರಾಯಣ ಅವರನ್ನು ವಿಚಾರಣೆ ನಡೆಸಿ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ.

ಈ ಐವರಿಂದ ಪಡೆದ ಉತ್ತರಗಳು ಹಾಗೂ ತನಿಖಾ ಮಾಹಿತಿಯನ್ನು ಎಫ್ ಎಸ್ ಎಲ್ ತಜ್ಞರು ತಾಳೆಹಾಕಿ ಪರಿಶೀಲಿಸುತ್ತಿದ್ದಾರೆ. ಮುಂದಿನ ಹಂತದ ಬ್ರೈನ್ ಮ್ಯಾಪಿಂಗ್ ಪ್ರಕ್ರಿಯೆಗಾಗಿ ಇವರನ್ನು ಮತ್ತೆ ಹಾಜರಾಗುವಂತೆ ಸೂಚಿಸಲಾಗಿದೆ. ಕುಟುಂಬಸ್ಥರ ಪರೀಕ್ಷೆ ಪೂರ್ಣಗೊಂಡ ಬಳಿಕ, ಪ್ರಕರಣದಲ್ಲಿ ಶಂಕಿತರಾಗಿರುವ ಇತರ ವ್ಯಕ್ತಿಗಳಿಗೂ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ನಡೆಸಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

mobil chat sitesi
Exit mobile version