ಹದಗೆಟ್ಟ ರಸ್ತೆ: ಪತಿಯೊಂದಿಗೆ ಕಾಮಗಾರಿ ನಡೆಸಿದ ಬಿಜೆಪಿ ಶಾಸಕಿ..!

05/09/2023

ಅನೇಕ ದಿನಗಳಿಂದ ಹದಗೆಟ್ಟಿದ್ದ ರಸ್ತೆಯನ್ನು ತಮ್ಮ ಪತಿಯೊಂದಿಗೆ ಸೇರಿ ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯ ಬಿಜೆಪಿ ಶಾಸಕಿಯೊಬ್ಬರು ಕಾಮಗಾರಿ ಮಾಡಿದ ಘಟನೆ ನಡೆದಿದೆ. ಇದರ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ರಸ್ತೆ ದುರಸ್ತಿ ಮಾಡದ್ದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯ ಬಿಜೆಪಿ ಶಾಸಕಿ ಚಂದನಾ ಬೌರಿ ಅವರು ಈ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಂಡು ರಸ್ತೆಯನ್ನು ಸರಿಪಡಿಸಲು ಖುದ್ದು ತಾವೇ ತೆರಳಿದರು.
ಕೆಲಸದ ವೇಳೆ ಕೂಲಿ ಕಾರ್ಮಿಕರು ತೊಡುವ ಬಟ್ಟೆಗಳನ್ನು ಧರಿಸಿದ ದಂಪತಿ ರಸ್ತೆ ರಿಪೇರಿಗೆ ಬೇಕಿದ್ದ ಮರಳು, ಜಲ್ಲಿ ಹೊತ್ತು ರಸ್ತೆಯನ್ನು ಸರಿಪಡಿಸುವ ಕಾರ್ಯವನ್ನು ಮಾಡಿದ್ದಾರೆ.

ಅಷ್ಟೇ ಅಲ್ಲದೇ ಪತಿ ಶ್ರವಣ್ ಅವರು ಶಾಸಕಿಯ ಜೊತೆಗಿದ್ದು, ರಸ್ತೆ ಗುಂಡಿಗಳನ್ನು ಮುಚ್ಚಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಜೆಪಿ ಶಾಸಕಿ, ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್‌ ತಾವು ಮಾಡಿರುವ ಅಭಿವೃದ್ಧಿಗಳನ್ನು ಹೇಳಿಕೊಂಡು ಪ್ರಚಾರ ಮಾಡುತ್ತಿದೆ. ಆದರೆ ರಂಗಮತಿಯಿಂದ ರಾಜಮೇಳವರೆಗಿನ ರಸ್ತೆ ಹದಗೆಟ್ಟಿರುವ ಕುರಿತು ಟಿಎಂಸಿಯ ಹಿರಿಯ ನಾಯಕರ ಗಮನಕ್ಕೆ ತಂದಿದ್ದರೂ ಕ್ಯಾರೇ ಅಂದಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚಿನ ಸುದ್ದಿ

Exit mobile version