ವಿದ್ಯಾರ್ಥಿನಿಗೆ ಗುಂಪಿನಿಂದ ಲೈಂಗಿಕ ದೌರ್ಜನ್ಯ: ಮುಖ್ಯ ಆರೋಪಿಯ ಕಾಲಿಗೆ ಗುಂಡು ಹೊಡೆದ ಪೊಲೀಸರು

Jamui Bihar
22/09/2026

ಪಾಟ್ನಾ: ಬಿಹಾರದ ಜಮುಯಿ(Bihar’s Jamui )ಯಲ್ಲಿ 10ನೇ ತರಗತಿ ವಿದ್ಯಾರ್ಥಿನಿಯ ಮೇಲೆ ನಡೆದ ಭೀಕರ ಲೈಂಗಿಕ ದೌರ್ಜನ್ಯ ಹಾಗೂ ಹಲ್ಲೆ ಪ್ರಕರಣದ ಮುಖ್ಯ ಆರೋಪಿ ನಂದನ್ ಯಾದವ್‌ ಗೆ ಮಂಗಳವಾರ ಮುಂಜಾನೆ ನಡೆದ ಪೋಲಿಸ್ ಎನ್‌ ಕೌಂಟರ್‌ನಲ್ಲಿ ಕಾಲಿಗೆ ಗುಂಡೇಟು ಬಿದ್ದಿದೆ. ಆರೋಪಿಯನ್ನು ತಕ್ಷಣವೇ ಪೋಲಿಸರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿದ್ದಾರೆ.

ತನಿಖೆಯ ಭಾಗವಾಗಿ ಜಮುಯಿ ಪೋಲಿಸರು ಆರೋಪಿ ನಂದನ್ ಯಾದವ್‌ನನ್ನು ಅಪರಾಧ ನಡೆದ ಸ್ಥಳ ಮಹಜರಿಗೆ ಕರೆದೊಯ್ಯುತ್ತಿದ್ದಾಗ, ಆತ ಪೋಲಿಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ನಡೆದ ಎನ್‌ ಕೌಂಟರ್‌ ನಲ್ಲಿ ಪೋಲಿಸರು ನಡೆಸಿದ ಗುಂಡಿನ ದಾಳಿಯಿಂದ ಆತನ ಕಾಲಿಗೆ ಗಾಯವಾಗಿದೆ.

ಸೆಪ್ಟೆಂಬರ್ 19 ರಂದು ಕೋಚಿಂಗ್ ತರಗತಿಯಿಂದ ಮನೆಗೆ ಹಿಂತಿರುಗುತ್ತಿದ್ದ 10ನೇ ತರಗತಿಯ ವಿದ್ಯಾರ್ಥಿ ಮತ್ತು ಆತನ ಗೆಳತಿಯನ್ನು ಗುಂಪೊಂದು ತಡೆದು ಹಲ್ಲೆ ನಡೆಸಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋದಲ್ಲಿ, ನಂದನ್ ಯಾದವ್ ವಿದ್ಯಾರ್ಥಿನಿಯನ್ನು ಬಲವಂತವಾಗಿ ಎತ್ತಿಕೊಂಡು ಹೋಗಲು ಯತ್ನಿಸುವುದು ಮತ್ತು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುವುದು ಸೆರೆಹಿಡಿಯಲ್ಪಟ್ಟಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 5 ಜನರನ್ನು ಬಂಧಿಸಲಾಗಿದೆ. ಇವರಲ್ಲದೆ ಇಬ್ಬರು ಅಪ್ರಾಪ್ತ ವಯಸ್ಕರು ಸಹ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ.

ಬಿಹಾರ ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಚೌಧರಿ ಮತ್ತು ಸಚಿವ ಶ್ರವಣ್ ಕುಮಾರ್ ಘಟನೆಯನ್ನು ಖಂಡಿಸಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿದೆ ಮತ್ತು ಯಾವುದೇ ಆರೋಪಿಯನ್ನೂ ಬಿಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ಸಂತ್ರಸ್ತೆ ಅಪ್ರಾಪ್ತೆಯಾಗಿರುವುದರಿಂದ ಆಕೆಯ ಗುರುತು ಬಹಿರಂಗಪಡಿಸುವುದು ಅಥವಾ ವಿಡಿಯೋ ಶೇರ್ ಮಾಡುವುದು ಪೋಕ್ಸೋ (POCSO) ಕಾಯ್ದೆ, ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಬಾಲನ್ಯಾಯ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧ ಎಂದು ಜಮುಯಿ ಎಸ್‌ಪಿ ವಿಶ್ವಾಜಿತ್ ದಯಾಳ್ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚಿನ ಸುದ್ದಿ

deneme bonusu veren siteler gamdom giriş deneme bonusu veren siteler
Exit mobile version