ರಾಜಸ್ಥಾನದಲ್ಲಿ ಬಿಜೆಪಿಗೆ ಚುನಾವಣೆ ಮುನ್ನವೇ ಶಾಕ್: ಕಮಲ ಪಾಳಯ ವಿರುದ್ಧ ಕೇಸ್ ಹಾಕಲು ರೈತ ಸಜ್ಜು; ಅಷ್ಟಕ್ಕೂ ಬಿಜೆಪಿ ಮಾಡಿದ ತಪ್ಪೇನು..?
ರಾಜಸ್ಥಾನ ರಾಜ್ಯ ವಿಧಾನಸಭೆ ಚುನಾವಣೆಯನ್ನು ಗೆಲ್ಲಲೇಬೇಕೆಂದು ಪಣತೊಟ್ಟಿರುವ ಬಿಜೆಪಿಗೆ ದೊಡ್ಡ
ಶಾಕ್ ತಾಗಿದೆ. ಬಿಜೆಪಿ ವಿರುದ್ದ ಕೋರ್ಟ್ ನಲ್ಲಿ
ಮಾನನಷ್ಟ ಮೊಕದ್ದಮೆಯನ್ನು ಹೂಡಲು ರೈತರೊಬ್ಬರು ಸಜ್ಜಾಗಿದ್ದಾರೆ. ಅದ್ಯಾಕೆ..? ಇಲ್ಲಿದೆ ಫುಲ್ ಡಿಟೈಲ್ಸ್..
ರಾಜಸ್ಥಾನ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಳೆದ ಕೆಲ ತಿಂಗಳುಗಳ ಹಿಂದೆ ನಹಿ ಸಹೇಗಾ ರಾಜಸ್ಥಾನ್ ಎಂಬ ಅಭಿಯಾನವನ್ನು ಆರಂಭಿಸಿದ್ದ ಬಿಜೆಪಿ ತನ್ನ ಪೋಸ್ಟರ್ಗಳಲ್ಲಿ ರೈತರೊಬ್ಬರ ಫೋಟೋವನ್ನು ಬಳಸಿತ್ತು. ಬಿಜೆಪಿ ತನ್ನ ಅಭಿಯಾನದ ಪ್ರಚಾರಕ್ಕಾಗಿ ಬಳಸಿರುವ ಫೋಟೋ ತಮ್ಮದು ಎಂದು ರೈತರೊಬ್ಬರು ಹೇಳಿಕೊಂಡಿದ್ದು, ಸಾರ್ವಜನಿಕವಾಗಿ ಬಿಜೆಪಿಯವರು ತಮ್ಮ ಮರ್ಯಾದೆಯನ್ನು ಹಾಳು ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಜೈಸಲ್ಮೇರ್ ಮೂಲದ ರೈತ ಮಧುರಾಮ್ ಜೈಪಾಲ್, ಈ ಕುರಿತು ಮಾತನಾಡಿದ್ದು, ತಮ್ಮ ಅನುಮತಿ ಇಲ್ಲದೇ ಬಿಜೆಪಿಯವರು ಫೋಟೋವನ್ನು ಬಳಸಿ ಇದನ್ನು ನೋಡಿದ ನನ್ನ ಸಂಬಂಧಿಕರು ಹಾಗೂ ನೆರೆ ಹೊರೆಯವರು ಏಷ್ಟು ಸಾಲ ಮಾಡಿದ್ದೀರಾ, ನಿಮ್ಮ ಜಮೀನನ್ನು ಮಾರಾಟಕ್ಕೆ ಇಟ್ಟಿದ್ದೀರಾ ಎಂದು ಕೇಳಿದ್ದರು. ಪ್ರಶ್ನೆ ಕೇಳಿದವರಿಗೆಲ್ಲಾ ಉತ್ತರ ನೀಡಿ ನನಗೆ ಸಾಕಾಗಿ ಹೋಯಿತು. ಬಿಜೆಪಿಯವರು ಸುಖಾಸುಮ್ಮನೆ ನನ್ನ ಫೋಟೋವನ್ನು ಬಳಸುವ ಮೂಲಕ ನನ್ನನ್ನು ಸಾಲಗಾರನನ್ನಾಗಿ ಬಿಂಬಿಸಿದ್ದಾರೆ.
ನನ್ನ ಹೆಸರಿನಲ್ಲಿ ಜಮೀನು ಇದ್ದು, ನಾನು ಇದುರೆವಗೂ ಖಾಸಗಿ ಹಾಗೂ ಬ್ಯಾಂಕಿನವರ ಬಳಿ ಸಾಲ ಪಡೆದು ವ್ಯವಸಾಯ ಮಾಡಿಲ್ಲ. ಬಿಜೆಪಿಯವರು ನಾನು ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದು, ಬ್ಯಾಂಕಿನವರು ನನ್ನ ಜಮೀನನ್ನು ಹರಾಜು ಹಾಕಿದ್ದಾರೆ ಎಂದು ಊರಿನ ತುಂಬೆಲ್ಲಾ ಪೋಸ್ಟರ್ಗಳನ್ನು ಅಂಟಿಸಿಕೊಂಡು ಬಂದಿದ್ದಾರೆ. ಇದರಿಂದ ನನಗೆ ತುಂಬಾ ನೋವಾಗಿದ್ದು, ನಾನು ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ರೈತ ಮಧುರಾಮ್ ಜೈಪಾಲ್ ಹೇಳಿದ್ದಾರೆ.
























