9:09 PM Wednesday 28 - January 2026

ಬಸ್ ಗೆ ಕಾರು ಡಿಕ್ಕಿ | ಮಹಿಳೆ ಸ್ಥಳದಲ್ಲಿಯೇ ಸಾವು | ಮೂವರ ಸ್ಥಿತಿ ಗಂಭೀರ

31/01/2021

ಅಂಕೋಲಾ: ಬಸ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಓರ್ವ ಮಹಿಳೆ ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ತಾಲ್ಲೂಕಿನ ಮಾಸ್ತಿಕಟ್ಟೆ ಬಳಿ ಭಾನುವಾರ ನಡೆದಿದೆ.

ಚಾಲಕನ ನಿಯಂತ್ರಣ ತಪ್ಪಿದ ಕಾರು ಚಲಿಸುತ್ತಿದ್ದ ಬಸ್ ಗೆ ಡಿಕ್ಕಿಯಾಗಿದೆ. ಪರಿಣಾಮವಾಗಿ ಬಸ್ ನಲ್ಲಿದ್ದ ಮಹಿಳೆ ಸೇರಿದಂತೆ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರ ಪೈಕಿ 28 ವರ್ಷದ ರೇಖಾ ಎಂಬವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಕಾರಿನಲ್ಲಿದ್ದವರು ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಉದ್ಯೋಗಿಗಳು ಎಂದು ತಿಳಿದುಬಂದಿದೆ. ಕಾರು ಅಂಕೋಲಾದಿಂದ ಯಲ್ಲಾಪುರದ ಕಡೆಗೆ ಸಾಗುತ್ತಿತ್ತು. ಯಲ್ಲಾಪುರದಿಂದ ಅಂಕೋಲಾ ಕಡೆಗೆ ಬರುತ್ತಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಅಂಕೋಲಾ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

Exit mobile version