ಚಿಕ್ಕಮಗಳೂರು: ಭೀಕರ ಅಪಘಾತ — KSRTC ಬಸ್–ಬೈಕ್ ಮುಖಾಮುಖಿ ಡಿಕ್ಕಿ; ನವವಿವಾಹಿತ ಬೆಂಕಿಗಾಹುತಿ!

chikkamagaluru accident
26/10/2026

ಚಿಕ್ಕಮಗಳೂರು:  ಸರ್ಕಾರಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನವವಿವಾಹಿತ ಸವಾರನೊಬ್ಬ ಧಗಧಗನೆ ಉರಿದು ದುರ್ಮರಣಕ್ಕೀಡಾದ ಧೋರಣೀಯ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸೆ ಬಳಿ ನಡೆದಿದೆ.

ಶೃಂಗೇರಿ ತಾಲೂಕಿನ ಕುಂಚೇಬೈಲು ನಿವಾಸಿ ನಾಗರಾಜ್ (32) ಮೃತಪಟ್ಟ ದುರ್ದೈವಿಯಾಗಿದ್ದಾರೆ.

ಜಯಪುರದಿಂದ ಶೃಂಗೇರಿಯತ್ತ ಸಾಗುತ್ತಿದ್ದ ಸರ್ಕಾರಿ ಬಸ್ ಹಾಗೂ ಎದುರಿನಿಂದ ಬರುತ್ತಿದ್ದ ನಾಗರಾಜ್ ಅವರ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ರಸ್ತೆಯ ಮಧ್ಯದಲ್ಲೇ ಬೈಕ್‌ಗೆ ದಿಢೀರನೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಕ್ಷಣಾರ್ಧದಲ್ಲಿ ಬೈಕ್ ಸವಾರ ನಾಗರಾಜ್ ಅವರಿಗೂ ಆವರಿಸಿದ್ದು, ಅವರು ಅರ್ಧಂಬರ್ಧ ಸುಟ್ಟು ಘಟನಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಅಪಘಾತದ ತೀವ್ರತೆಗೆ ಸರ್ಕಾರಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂದಕಕ್ಕೆ ಇಳಿದು ನಿಂತಿದೆ.

5 ದಿನದ ಹಿಂದೆಯಷ್ಟೇ ಮದುವೆಯಾಗಿದ್ದ ಯುವಕ!

ಮೃತ ನಾಗರಾಜ್ ಅವರಿಗೆ ಕೇವಲ 5 ದಿನಗಳ ಹಿಂದೆಯಷ್ಟೇ ವಿವಾಹವಾಗಿತ್ತು. ಮದುವೆಯಾಗಿ ವಾರವೂ ಕಳೆಯುವ ಮುನ್ನವೇ ಈ ದುರಂತ ಸಂಭವಿಸಿದ್ದು, ಕುಟುಂಬಸ್ಥರ ಹಾಗೂ ನವವಧುವಿನ ಕ್ರಂದನ ಮುಗಿಲುಮುಟ್ಟಿದೆ. ಇಡೀ ಗ್ರಾಮದಲ್ಲಿ ಶೋಕಸಾಗರ ಆವರಿಸಿದೆ.

ಘಟನೆ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಶೃಂಗೇರಿ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.

ಇತ್ತೀಚಿನ ಸುದ್ದಿ

deneme bonusu veren siteler gamdom giriş deneme bonusu veren siteler
Exit mobile version