7:08 PM Wednesday 5 - November 2025

ತಂದೆ ಮೃತಪಟ್ಟರೂ ವಿದೇಶದಿಂದ ಬಾರದ ಮಕ್ಕಳು: ಪೊಲೀಸರಿಂದ ವ್ಯಕ್ತಿಯ ಅಂತ್ಯಸಂಸ್ಕಾರ!

chandra sharma
28/08/2023

ಚಿಕ್ಕೋಡಿ: ತಂದೆ ಮೃತಪಟ್ಟರೂ ವಿದೇಶದಲ್ಲಿದ್ದ ಮಕ್ಕಳು ತಂದೆಯ ಅಂತ್ಯಕ್ರಿಯೆಗೆ ಬಾರದ ಕಾರಣ, ಚಿಕ್ಕೋಡಿ ಪೊಲೀಸರೇ ಅಂತ್ಯಕ್ರಿಯೆ ನೆರವೇರಿಸಿ, ಮಾನವೀಯತೆ ಮೆರೆದಿದ್ದಾರೆ.

ಮಹಾರಾಷ್ಟ್ರದ ಪುಣೆ ಮೂಲದ ಚಂದ್ರ ಶರ್ಮಾ(72) ಪಾರ್ಶ್ವವಾಯುವಿನಿಂದ ಬಳಲುತ್ತಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಮಕ್ಕಳ ಪೈಕಿ ಮಗ ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿದ್ದು, ಮಗಳು ಕೆನಡಾದಲ್ಲಿ ನೆಲೆಸಿದ್ದಾಳೆ.

ಊರಿನಲ್ಲಿ ಅನಾರೋಗ್ಯ ಪೀಡಿತರಾಗಿದ್ದ ಚಂದ್ರ ಶರ್ಮಾರನ್ನು ಗುತ್ತಿಗೆ ಆಧಾರದಲ್ಲಿ ವ್ಯಕ್ತಿಯೋರ್ವ ಆರೈಕೆ ಮಾಡುತ್ತಿದ್ದನು. ಆತನ ವಾಯಿದೆ ಮುಗಿದ ಕಾರಣ ಆತ ಚಂದ್ರ ಶರ್ಮಾರನ್ನು ಲಾಡ್ಜ್ ನಲ್ಲೇ ಬಿಟ್ಟು ತೆರಳಿದ್ದಾನೆ. ಈ ಬಗ್ಗೆ ಲಾಡ್ಜ್ ಮ್ಯಾನೇಜರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ವಿಚಾರಿಸಿದಾಗ ತಾನು ನಿವೃತ್ತ ಬ್ಯಾಂಕ್ ಮ್ಯಾನೇಜರ್ ಎಂದು ತಮ್ಮ ವಿವರಗಳನ್ನ ನೀಡಿದ್ದಾರೆ.

ತಂದೆಯ ಸ್ಥಿತಿಯ ಬಗ್ಗೆ ಮಕ್ಕಳಿಗೆ ಪೊಲೀಸರು ಕರೆ ಮಾಡಿದ್ರೆ, ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಕೊನೆಗೆ ಪೊಲೀಸರು ಚಿಕ್ಕೋಡಿ ಆಸ್ಪತ್ರೆಗೆ ಚಂದ್ರ ಶರ್ಮಾ ಅವರನ್ನು ದಾಖಲಿಸಿ ಚಿಕಿತ್ಸೆ ನೀಡಿದ್ದು, ಬಳಿಕ ಬೀಮ್ಸ್ ಗೆ ರವಾನಿಸಿದ್ದರು. ಆದರೆ ಎರಡು ದಿನಗಳ ಹಿಂದೆ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.
ತಂದೆ ಮೃತಪಟ್ಟ ಸುದ್ದಿಯನ್ನು ತಿಳಿಸಲು ಕರೆ ಮಾಡಿದಾಗ ನಮಗೂ ಅವರಿಗೂ ಸಂಬಂಧವಿಲ್ಲ ಅಂತ ಮಕ್ಕಳು ಹೇಳಿದ್ದಾರಂತೆ, ಕೊನೆಗೆ ಪೊಲೀಸರೇ ಮರಣೋತ್ತರ ಪರೀಕ್ಷೆಯ ಬಳಿಕ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಜನರು ನೂರಾರು ಶ್ರೇಷ್ಟತೆಗಳ ಬಗ್ಗೆ ಮಾತನಾಡುತ್ತಾರೆ. ನಮ್ಮ ಜಾತಿ ಶ್ರೇಷ್ಠ, ನಮ್ಮ ಧರ್ಮ ಶ್ರೇಷ್ಠ ಅಂತ ದಿನ ಗುದ್ದಾಡುತ್ತಾರೆ. ಆದರೆ ಮಾನವೀಯತೆ ಎಂಬ ಜಾತಿ, ಧರ್ಮ ಮನುಷ್ಯನಲ್ಲಿ ಬೆಳೆಯದೇ ಇದ್ದರೆ, ಎಂತಹ ಘಟನೆಗಳೆಲ್ಲ ನಡೆಯಬಹುದು ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ಒಂದು ಮಾನವೀಯ ನೆಲೆಯಲ್ಲಿ ನಿಂತು ಮೃತ ಹಿರಿಯ ಜೀವಕ್ಕೆ ಗೌರವಯುತವಾಗಿ ಅಂತ್ಯಸಂಸ್ಕಾರ ನೆರವೇರಿಸಿದ ಚಿಕ್ಕೋಡಿ ಪೊಲೀಸರು ಎಲ್ಲರಿಗೂ ಮಾದರಿಯಾಗಿದ್ದಾರೆ.

ಇತ್ತೀಚಿನ ಸುದ್ದಿ

Exit mobile version