ಯುವನಿಧಿಗೆ ಚಾಲನೆ ನೀಡಿ ಪ್ರಧಾನಿಯನ್ನು ತರಾಟೆಗೆತ್ತಿಕೊಂಡ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಚುನಾವಣಾ ಪ್ರಣಾಳಿಕೆಯ 5ನೇ ‘ಗ್ಯಾರಂಟಿ’ ಭರವಸೆ ‘ಯುವನಿಧಿ’ಗೆ ಸಿಎಂ ಸಿದ್ದರಾಮಯ್ಯ ಅವರು ಮಂಗಳವಾರ ಚಾಲನೆ ನೀಡಿದರು.
ನಗರದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುವಕ ಹಾಗೂ ಯುವತಿ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಬಳಿಕ ಸಿಎಂ ಹಾಗೂ ಡಿಸಿಎಂ ಯುವನಿಧಿ ಯೋಜನೆ ಪೋಸ್ಟರ್ ಬಿಡುಗಡೆ ಮಾಡಿದರು. ಇದೇ ವೇಳೆ ಸಿಎಂ ಅವರು ಯುವನಿಧಿ ಯೋಜನೆಯ ಲೋಗೋ ಬಿಡುಗಡೆ ಮಾಡಿದರು. ನಂತರ ಯುವನಿಧಿ ಯೋಜನೆ ನೋಂದಣಿ ಪ್ರಕ್ರಿಯೆಗೆ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯನವರು ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಚುನಾವಣಾ ಪೂರ್ವದಲ್ಲಿ ಗ್ಯಾರಂಟಿ ಯೋಜನೆಗಳ ಭರವಸೆಯನ್ನು ಕಾಂಗ್ರೆಸ್ ಕೊಟ್ಟಾಗ, ಅದನ್ನು ಜಾರಿ ಮಾಡಲು ಆಗುವುದಿಲ್ಲ. ಜಾರಿಯಾದರೆ ಕರ್ನಾಟಕ ಸರ್ಕಾರ ದಿವಾಳಿಯಾಗುತ್ತದೆ ಎಂದು ಪ್ರಧಾನಿ ಮೋದಿಯವರು ಹೇಳಿದ್ದರು. ಆದರೆ, ರಾಜ್ಯ ದಿವಾಳಿ ಆಗಿಲ್ಲ, ಐದು ಗ್ಯಾರಂಟಿ ಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದೇವೆ. ಗ್ಯಾರಂಟಿ ಜಾರಿ ಮಾಡಿದ ಮೇಲೂ ಕರ್ನಾಟಕ ಸರ್ಕಾರ ಸದೃಢವಾಗಿದೆ, ದಿವಾಳಿಯಾಗಿಲ್ಲ. ಏನು ಇವರು ದೊಡ್ಡ ಆರ್ಥಿಕ ತಜ್ಞರಾ? ಎಂದು ತರಾಟೆಗೆತ್ತಿಕೊಂಡರು.
ನಮ್ಮ ಗ್ಯಾರಂಟಿ ಘೋಷಣೆ ಬಗ್ಗೆ ಟೀಕೆ ಮಾಡಿದ್ದ ಬಿಜೆಪಿ, ರಾಜಸ್ಥಾನ, ಛತ್ತೀಸ್ಗಢ, ತೆಲಂಗಾಣದಲ್ಲಿ ಗ್ಯಾರಂಟಿ ಘೋಷಣೆ ಮಾಡಿದ್ದರು. ಈ ಆರ್ಥಿಕ ವರ್ಷದಲ್ಲಿ ಗ್ಯಾರಂಟಿ ಜಾರಿಗೆ 39,000 ಕೋಟಿ ಖರ್ಚು ಆಗುತ್ತದೆ. ಹೀಗಿದ್ದರೂ ಬಜೆಟ್ ಕಾರ್ಯಕ್ರಮಗಳಿಗೆ ಹಣ ಒದಗಿಸಿದ್ದೇವೆ ಎಂದು ಅವರು ಹೇಳಿದರು.
ಕರ್ನಾಟಕದಲ್ಲಿ ಪದವಿ ಹಾಗೂ ಡಿಪ್ಲೊಮಾ ಓದಿ ಉದ್ಯೋಗ ಇಲ್ಲದ 5,29,000 ಯುವಕ- ಯುವತಿಯರು ಇದ್ದಾರೆ. ಈ ಪೈಕಿ 4,21,000 ಸಾವಿರ ಪದವೀಧರರು ಹಾಗೂ 48,000 ಡಿಪ್ಲೊಮಾ ಪದವೀಧರರು ಇದ್ದಾರೆಂದು ಮಾಹಿತಿ ನೀಡಿದರು.
ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡ್ತೇವೆ ಎಂದು ಮೋದಿ ಭರವಸೆ ಕೊಟ್ಟಿದ್ದರು. ಆದರೆ ಕೊಟ್ಟರಾ? ಮಾತು ತಪ್ಪಿಸಿದ್ದು ಯಾರು? ನಾನಾ ನೀವಾ? ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಇದು ನಮಗೂ ಬಿಜೆಪಿಗೂ ಇರುವ ವ್ಯತ್ಯಾಸ ಎಂದರು.