ದೇಶಾದ್ಯಂತ ಎಸ್ ಐಆರ್ (SIR) ಕೈಗೊಳ್ಳುವುದು ಕಾನೂನುಬಾಹಿರ: ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಆರ್.ಕೆ. ಸಿಂಗ್ ಕಿಡಿ
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ಕಾರ್ಯವೈಖರಿ ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ವಿರುದ್ಧ ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಹಾಗೂ ಬಿಹಾರದ ಆರಾ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಆರ್.ಕೆ. ಸಿಂಗ್ ಗಂಭೀರ ಆರೋಪಗಳನ್ನು ಮಾಡಿದ್ದು, ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶಾದ್ಯಂತ ಮತದಾರರ ಪಟ್ಟಿಯಲ್ಲಿ ಎಸ್ ಐಆರ್ ಕೈಗೊಳ್ಳುವುದು ಸಂಪೂರ್ಣವಾಗಿ ಕಾನೂನುಬಾಹಿರ ಎಂದು ಅವರು ಪ್ರತಿಪಾದಿಸಿದ್ದಾರೆ.
2003ರ ಬಳಿಕ ಮತದಾರರ ನೋಂದಣಿ ಅಧಿಕಾರಿಗಳು ಪಟ್ಟಿಗೆ ಸೇರಿಸಿದ್ದ ಎಲ್ಲ ಮತದಾರರ ಹೆಸರುಗಳನ್ನು ಯಾವುದೇ ಆಧಾರವಿಲ್ಲದೆ, ಯಾವುದೇ ವಿಚಾರಣೆ ನಡೆಸದೆ ಹಾಗೂ ನೋಂದಾಯಿತ ಮತದಾರರಿಗೆ ಶೋಕಾಸ್ ನೋಟಿಸ್ ನೀಡದೆ ತೆಗೆದುಹಾಕಲಾಗಿದೆ ಎಂದು ಆರ್.ಕೆ. ಸಿಂಗ್ ಆರೋಪಿಸಿದ್ದಾರೆ. ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿಯೇ ಉಳಿಯಬೇಕಾದರೆ, ಸಿಇಸಿ ಜ್ಞಾನೇಶ್ ಕುಮಾರ್ ಮತ್ತು ಅವರ ಮೇಲಾಧಿಕಾರಿಗಳು ಎಸ್ಐಆರ್ ಹೆಸರಿನಲ್ಲಿ ಮಾಡುತ್ತಿರುವ ಕಾನೂನು ಉಲ್ಲಂಘನೆಗಳನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿರುವ ಸಿಂಗ್, ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರು ರಾಜೀನಾಮೆ ನೀಡುವವರೆಗೆ ವಿರೋಧ ಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದಾರೆ.
ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 21ರ ಪ್ರಕಾರ ವಿಶೇಷ ಪರಿಷ್ಕರಣೆಯನ್ನು ವಿಶೇಷ ಸಂದರ್ಭಗಳಲ್ಲಿ ಮಾತ್ರ ಕೈಗೊಳ್ಳಬೇಕು ಮತ್ತು ಪ್ರತಿಯೊಂದು ಪ್ರಕರಣದಲ್ಲೂ ಅದಕ್ಕೆ ಕಾರಣಗಳನ್ನು ಲಿಖಿತವಾಗಿ ದಾಖಲಿಸಬೇಕು. ಯಾವುದೇ ಒಂದು ನಿರ್ದಿಷ್ಟ ಕ್ಷೇತ್ರ ಅಥವಾ ಅದರ ಭಾಗಕ್ಕೆ ಮಾತ್ರ ಇಂತಹ ಪರಿಷ್ಕರಣೆ ಅನ್ವಯಿಸಬೇಕೇ ಹೊರತು ದೇಶಾದ್ಯಂತ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ಕೈಗೊಳ್ಳುವುದು ಕಾನೂನುಬಾಹಿರವಾಗಿದೆ ಎಂದಿದ್ದಾರೆ. ಈ ನಿರ್ಧಾರವನ್ನು ಪೂರ್ಣ ಆಯೋಗವೇ ತೆಗೆದುಕೊಂಡಿದೆಯೇ ಅಥವಾ ಕೇವಲ ಜ್ಞಾನೇಶ್ ಕುಮಾರ್ ಮಾತ್ರವೇ ತೆಗೆದುಕೊಂಡಿದ್ದಾರಾ ಎಂದು ಅವರು ಪ್ರಶ್ನಿಸಿದ್ದಾರೆ.
ಕಳೆದ 10 ತಿಂಗಳ ಅವಧಿಯಲ್ಲಿ ಭಾರತೀಯ ಚುನಾವಣಾ ಆಯೋಗದ ಮೂವರು ಚುನಾವಣಾ ಆಯುಕ್ತರಲ್ಲಿ ಇಬ್ಬರು ಎಸ್ಐಆರ್ ಪ್ರಕ್ರಿಯೆಯ ವಿವಿಧ ಅಂಶಗಳಿಗೆ ಸಂಬಂಧಿಸಿ 14 ಬಾರಿ ಅಧಿಕೃತವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ‘ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದ್ದನ್ನು ಸಿಂಗ್ ನೆನಪಿಸಿದ್ದಾರೆ. ಸೆಕ್ಷನ್ 22ನ್ನು ಉಲ್ಲೇಖಿಸಿರುವ ಅವರು, ಮತದಾರರ ಪಟ್ಟಿಯಿಂದ ಮತದಾರರೊಬ್ಬರ ಹೆಸರನ್ನು ತೆಗೆದುಹಾಕುವ ಅಧಿಕಾರ ಕೇವಲ ಮತದಾರರ ನೋಂದಣಿ ಅಧಿಕಾರಿಗೆ ಮಾತ್ರ ಇದೆ ಮತ್ತು ಅದಕ್ಕೂ ಮೊದಲು ನಿರ್ದಿಷ್ಟ ಕಾರಣಗಳ ಆಧಾರದ ಮೇಲೆ ಸೂಕ್ತ ವಿಚಾರಣೆ ನಡೆಸಿ ಸಂಬಂಧಪಟ್ಟ ವ್ಯಕ್ತಿಗೆ ತಮ್ಮ ವಾದ ಮಂಡಿಸಲು ಸಮಂಜಸವಾದ ಅವಕಾಶ ನೀಡಬೇಕು ಎಂದು ತಿಳಿಸಿದ್ದಾರೆ. ಆದರೆ ಮೇಲ್ಮನವಿಗಳು ಬಾಕಿಯಿದ್ದಾಗಲೇ ಹೆಸರುಗಳನ್ನು ಕೈಬಿಟ್ಟು ಸಿದ್ಧಪಡಿಸಿದ ಹೊಸ ಪಟ್ಟಿಯನ್ನು ಚುನಾವಣೆಯಲ್ಲಿ ಬಳಸಲಾಗಿದೆ ಎಂದು ಅವರು ಆಕ್ಷೇಪಿಸಿದ್ದಾರೆ.

























