ಬೆದರಿಕೆಗೆ ಕ್ಯಾರೇ ಅನ್ನದ ವಿದ್ಯಾರ್ಥಿ: ದಲಿತ ವಿದ್ಯಾರ್ಥಿ, ಅಜ್ಜಿ ಮೇಲೆ ಜಾತಿವಾದಿ ವಿದ್ಯಾರ್ಥಿಗಳಿಂದ ಹಲ್ಲೆ

30/08/2023

ಇದು ಅತಿರೇಕದ ವರ್ತನೆ. ಶಿಕ್ಷಣದ ಮಟ್ಟ ಹೆಚ್ಚಾಗುತ್ತಿದ್ದರೂ ಮೂಢನಂಬಿಕೆ, ಅಂಧತ್ವ ಇನ್ನೂ ಮರೆಯಾಗಿಲ್ಲ ಅನ್ನಿಸುತ್ತದೆ. ಹೌದು. ನಮ್ಮ ಮಾತನ್ನು ಮೀರಿ ಬಸ್ಸಿನಲ್ಲಿ ಪ್ರಯಾಣಿಸಿದ್ದಾನೆ ಎಂಬ ಕಾರಣ ಮುಂದಿಟ್ಟು ಉರಾಳಿ ಗೌಂಡರ್ ಸಮುದಾಯಕ್ಕೆ ಸೇರಿದ 20ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ದಲಿತ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿರುವ ಅಮಾನವೀಯ ಘಟನೆ ತಮಿಳುನಾಡಿನ ಕರೂರು ಜಿಲ್ಲೆಯಲ್ಲಿ ನಡೆದಿದೆ.

ಕರೂರು ಜಿಲ್ಲೆಯ ಉಪ್ಪಿಡಮಂಗಲಂ ಅಲಿಯಾಗೌಂಡನೂರು ಗ್ರಾಮದ 10ನೇ ತರಗತಿ ವಿದ್ಯಾರ್ಥಿ ಜೀವಾ ಹಲ್ಲೆಗೊಳಗಾದ ಬಾಲಕ. ಹಲ್ಲೆ ಮಾಡಿರುವುದನ್ನು ಪ್ರಶ್ನಿಸಿದ್ದಕ್ಕೆ ಮತ್ತೆ ಕೆರಳಿದ ಜಾತಿವಾದಿ ವಿದ್ಯಾರ್ಥಿಗಳು ದಲಿತ ವಿದ್ಯಾರ್ಥಿಯ ಮನೆಗೆ ನುಗ್ಗಿ ಬಾಲಕನ ಅಜ್ಜಿಯ ಮೇಲೂ ಹಲ್ಲೆ ನಡೆಸಿದ್ದಾರೆ. ಇದು ಕಳೆದ 20 ದಿನಗಳಲ್ಲಿ ತಮಿಳುನಾಡಿನಲ್ಲಿ ನಡೆದ ಮೂರನೇ ಹಲ್ಲೆ ಪ್ರಕರಣವಾಗಿದೆ.

ಜೀವಾ ಸರಕಾರಿ ಬಸ್‌ನಲ್ಲಿ ಮನೆಗೆ ಹೋಗುತ್ತಿದ್ದ. ಆತ ತನ್ನ ಸ್ನೇಹಿತನೊಂದಿಗೆ ಮಾತನಾಡುತ್ತಾ ಬರುವಾಗ ಉರಾಳಿ ಗೌಂಡರ್ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳ ಗುಂಪು ಆತ ಕೆಳಜಾತಿ ಎಂದು ನಿಂದಿಸಿದ್ದು, ತಮ್ಮನ್ನು ನೋಡಿ ಯಾಕೆ ನಗುತ್ತಿದ್ದೀಯಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಇನ್ನು ಮುಂದೆ ಈ ಬಸ್ಸಿನಲ್ಲಿ ಬರಬಾರದೆಂದು ಬೆದರಿಕೆ ಹಾಕಿದ್ದಾರೆ.

ಆದರೆ ಈ ಬೆದರಿಕೆಯನ್ನು ಲೆಕ್ಕಿಸದ ಜೀವಾ ಮರುದಿನವೂ ಅದೇ ಬಸ್‌ನಲ್ಲಿ ಪ್ರಯಾಣಿಸಿದ್ದ. ಇದೇ ವೇಳೆ ಕಿಡಿಗೇಡಿ ವಿದ್ಯಾರ್ಥಿಗಳು ಆತನನ್ನು ಥಳಿಸಿದ್ದರು. ಜೀವಾ ಮೇಲೆ ಹಲ್ಲೆ ನಡೆದಿದ್ದನ್ನು ಸೋದರ ಮಾವ ಪ್ರಶ್ನಿಸಿದ್ದು, ಇದರಿಂದ ಕೆರಳಿದ ಹಲ್ಲೆಕೋರರು, ಜೀವಾ ಮನೆಗೆ ತೆರಳಿ ಆತನಿಗೆ ಮತ್ತು ಆತನ ಅಜ್ಜಿ ಕಾಳಿಯಮ್ಮಾಳ್‌ ಗೂ ಹಲ್ಲೆ ನಡೆಸಿದ್ದಾರೆ.

ಕೆಲ ವರ್ಷಗಳ ಹಿಂದೆ ಜೀವಾ ಹೆತ್ತವರನ್ನು ಕಳೆದುಕೊಂಡಿದ್ದ. ಹೀಗಾಗಿ ತನ್ನ ಅಜ್ಜಿಯೊಂದಿಗೆ ವಾಸವಿದ್ದ. ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಅವರಿಬ್ಬರನ್ನೂ ದುಷ್ಕರ್ಮಿಗಳಿಂದ ರಕ್ಷಿಸಿದ್ದಾರೆ. ಕರೂರು ಮೆಡಿಕಲ್‌ ಕಾಲೇಜಿನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಇತ್ತೀಚಿನ ಸುದ್ದಿ

Exit mobile version