ಹಣಕ್ಕಾಗಿ ಬೌದ್ಧ ಸನ್ಯಾಸಿಯ ಬರ್ಬರ ಹತ್ಯೆ: ಪ್ರಕರಣ ಭೇದಿಸಿ ಮೂವರು ಆರೋಪಿಗಳನ್ನು ಬಂಧಿಸಿದ ಧಾರವಾಡ ಪೊಲೀಸರು
ಧಾರವಾಡ: ಇತ್ತೀಚೆಗೆ ಧಾರವಾಡ ಬೈಪಾಸ್ ರಸ್ತೆಯ ಬಳಿ ನಡೆದಿದ್ದ ಟಿಬೆಟಿಯನ್ ಮೂಲದ ಬೌದ್ಧ ಸನ್ಯಾಸಿ ತಾಶಿ ಧೊಂದೂಪ ಅವರ ನಿಗೂಢ ಸಾವು ಪ್ರಕರಣವನ್ನು ಭೇದಿಸುವಲ್ಲಿ ಧಾರವಾಡ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ. ಕೇವಲ ಹಣದ ಆಸೆಗಾಗಿ ಸನ್ಯಾಸಿಯನ್ನು ಅಪಹರಿಸಿ ಹತ್ಯೆ ಮಾಡಲಾಗಿದ್ದು, ಈ ಸಂಬಂಧ ಮಹಾರಾಷ್ಟ್ರದ ಕೊಲ್ಹಾಪುರದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ನಿವಾಸಿಯಾಗಿದ್ದ ಬೌದ್ಧ ಸನ್ಯಾಸಿ ತಾಶಿ ಧೊಂದೂಪ ಅವರು ಏಪ್ರಿಲ್ 28 ರಂದು ವಾಕಿಂಗ್ ಮಾಡುತ್ತಿದ್ದಾಗ ದುಷ್ಕರ್ಮಿಗಳು ಅವರನ್ನು ಅಪಹರಿಸಿದ್ದರು. ಬೌದ್ಧ ಸನ್ಯಾಸಿಗಳ ಬಳಿ ಅಪಾರ ಪ್ರಮಾಣದ ಹಣವಿರುತ್ತದೆ ಎಂಬ ತಪ್ಪು ಕಲ್ಪನೆಯಿಂದ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ.
ಅಪಹರಣದ ಬಳಿಕ ಹಣ ನೀಡುವಂತೆ ಸನ್ಯಾಸಿಗೆ ತೀವ್ರವಾಗಿ ಹಿಂಸೆ ನೀಡಲಾಗಿದೆ. ಆದರೆ ಅವರ ಬಳಿ ಹಣವಿಲ್ಲದಿದ್ದಾಗ ಕಾರಿನಲ್ಲಿಯೇ ಅವರ ಮೇಲೆ ಭೀಕರವಾಗಿ ಹಲ್ಲೆ ನಡೆಸಲಾಗಿದ್ದು, ತೀವ್ರ ಗಾಯಗೊಂಡ ಸನ್ಯಾಸಿ ಕಾರಿನಲ್ಲೇ ಕೊನೆಯುಸಿರೆಳೆದಿದ್ದಾರೆ. ನಂತರ ಗಾಬರಿಗೊಂಡ ಆರೋಪಿಗಳು ಶವವನ್ನು ಧಾರವಾಡ ಬೈಪಾಸ್ ಬಳಿ ಎಸೆದು ಪರಾರಿಯಾಗಿದ್ದರು.
ಆರಂಭದಲ್ಲಿ ಇದೊಂದು ಅಪಘಾತ ಎಂದು ಭಾವಿಸಲಾಗಿತ್ತು. ಆದರೆ ಮೃತದೇಹದ ಮೇಲಿದ್ದ ಗಾಯದ ಗುರುತುಗಳನ್ನು ಗಮನಿಸಿದ ಪೊಲೀಸರಿಗೆ ಅನುಮಾನ ವ್ಯಕ್ತವಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡಿದಾಗ, ಮುಂಡಗೋಡದ ಪೆಟ್ರೋಲ್ ಬಂಕ್ ಒಂದರಲ್ಲಿ ಆರೋಪಿಗಳು ಸಿಎನ್‌ಜಿ ತುಂಬಿಸಲು ಇಳಿದಿದ್ದ ದೃಶ್ಯಗಳು ಸೆರೆಯಾಗಿದ್ದವು.
ಇದರ ಸುಳಿವು ಹಿಡಿದು ಕಾರ್ಯಾಚರಣೆ ನಡೆಸಿದ ಧಾರವಾಡ ಪೊಲೀಸರು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಸಂಕೇತ ಯಾದವ್ (24), ವೈಭವ್ ಚವ್ಹಾಣ (30) ಮತ್ತು ಸಿದ್ಧೇಶ ಭೋಸ್ಲೆ (18) ಎಂಬುವವರನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೂ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಯಾವುದೇ ಪ್ರಬಲ ಸಾಕ್ಷ್ಯಗಳಿಲ್ಲದಿದ್ದರೂ ಅತ್ಯಂತ ಕ್ಷಿಪ್ರವಾಗಿ ಹಂತಕರನ್ನು ಪತ್ತೆಹಚ್ಚಿದ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























