2:33 AM Wednesday 20 - August 2025

ಸ್ವಾಭಿಮಾನವಿಲ್ಲದ ಅಭಿಮಾನದ ಬಗ್ಗೆ ಅಂಬೇಡ್ಕರ್ ಏನು ಹೇಳಿದ್ದಾರೆ ಗೊತ್ತಾ?: ಸ್ಟಾರ್ ನಟರ ಅಭಿಮಾನಿಗಳು ತಿಳಿಯಲೇ ಬೇಕಿದೆ ಈ ವಿಷಯ

self respect
06/11/2023

ಸ್ಟಾರ್ ನಟರ ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳು ಶುಭಾಶಯ ಹೇಳುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗುತ್ತಾ ಇರುತ್ತವೆ. ಕೆಲವೊಂದು ಬಾರಿ ಅಭಿಮಾನಿಗಳು ಒಂದು ಫೋಟೋಗಾಗಿ ಪಡುವ ಕಷ್ಟಗಳನ್ನು ನೋಡಿದರೆ, ಇಷ್ಟೊಂದು ಕಷ್ಟಪಟ್ಟು ಫೋಟೋ ತೆಗೆಸಿಕೊಳ್ಳಬೇಕೇ? ಎನ್ನುವ ಪ್ರಶ್ನೆಗಳು ಕಾಡದೇ ಇರಲ್ಲ.

ಸ್ಯಾಂಡಲ್ ವುಡ್ ನ ಹಲವು ನಟರು ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆಗೆ ಸಂಭ್ರಮಿಸುತ್ತಾರೆ. ಈ ಸಂದರ್ಭದಲ್ಲಿ ಆಗಮಿಸುವ ಸಾವಿರಾರು ಅಭಿಮಾನಿಗಳನ್ನು ನಿಯಂತ್ರಿಸುವುದೇ ಒಂದು ಕಷ್ಟದ ಕೆಲಸವಾಗಿ ಪರಿಣಮಿಸುತ್ತದೆ. ಕೆಲವೊಬ್ಬರು, ನಟರ ಜೊತೆಗೆ ಸೆಲ್ಫಿಗಳಿಗೆ ಮುಗಿಬೀಳುತ್ತಾರೆ. ಒಬ್ಬೊಬ್ಬರಿಗೆ ಕನಿಷ್ಟ ಒಂದು ಸೆಕೆಂಡು ಕೂಡ ನಿಂತುಕೊಳ್ಳಲೂ ಅವಕಾಶವಿಲ್ಲದಿದ್ದರೂ, ಸೆಲ್ಫಿ ತೆಗೆದುಕೊಳ್ಳಲು ಅವರು ಪರದಾಡುವುದನ್ನು ನೋಡಿದರೆ, ಇಷ್ಟೊಂದು ಹುಚ್ಚು ಅಭಿಮಾನವೇ? ಇದರ ಅವಶ್ಯಕತೆ ಇದೆಯೇ ಎನ್ನುವ ಪ್ರಶ್ನೆಗಳು ಮೂಡಬಹುದು.

ಇತ್ತೀಚೆಗೆ ಸ್ಯಾಂಡಲ್ ವುಡ್ ನಟರೊಬ್ಬರ ಪುತ್ರ ಹುಟ್ಟುಹಬ್ಬ ಆಚರಿಸಿಕೊಂಡರು. ಆ ನಟನ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. ಹುಡುಗನ ಕೈಕುಲುಕುತ್ತಾ ವಿಶ್ ಮಾಡುತ್ತಿದ್ದರು. ಪಕ್ಕದಲ್ಲೇ ಬಾಡಿಗಾರ್ಡ್ ಗಳು ಜನರನ್ನು ನಿಯಂತ್ರಿಸುತ್ತಿದ್ದರು. ಒಂದು ಹಂತದಲ್ಲಿ ಬಾಡಿಗಾರ್ಡ್ ಗಳು, “ಈ ಪೀಡೆಗಳು ಯಾಕಾದ್ರೂ ಬಂದು ಜೀವ ತಿಂತಿದ್ದಾವೋ” ಎನ್ನುವಂತೆ  ಬಂದಿದ್ದ ಅಭಿಮಾನಿಗಳನ್ನು ಪಕ್ಕಕ್ಕೆ ತಳ್ಳಿ ತಳ್ಳಿ ಕಳುಹಿಸುತ್ತಿರೋದು ಕಂಡು ಬಂತು. ಇಷ್ಟೊಂದು ದುರ್ಗತಿಯಿಂದ ಒಬ್ಬರಿಗೆ ಶುಭಾಶಯ ಹೇಳಬೇಕೆ? ಎನ್ನುವುದೇ ಪ್ರಶ್ನೆ.

ambedkar

ಸ್ವಾಭಿಮಾನ ಇದ್ದರೆ ಮಾತ್ರವೇ ಅಭಿಮಾನ ಬರಬೇಕು. ಸ್ವಾಭಿಮಾನವೇ ಇಲ್ಲದವರಂತೆ ಅಭಿಮಾನಿಗಳಾಗೋದು ಎಷ್ಟೊಂದು ಸರಿ. ಒಬ್ಬ ನಟನ ಮೇಲೆ ಅಭಿಮಾನ ಇರಲಿ, ಆತನ ಪ್ರತಿಭೆ ಕಂಡು ಎಲ್ಲರೂ ಸಂತೋಷಪಡಲಿ, ಆದರೆ, ಅಭಿಮಾನದ ಹೆಸರಿನಲ್ಲಿ ಅವರನ್ನೂ ಸಂಕಷ್ಟಕ್ಕೆ ಸಿಲುಕಿಸಿ, ಬಾಡಿಗಾರ್ಡ್ಸ್ ಬಳಿಯಿಂದ ತಳ್ಳಾಡಿಸಿಕೊಂಡು ನಿಮಗೆ ನೀವೇ ಅವಮಾನ ಮಾಡಿಸಿಕೊಳ್ಳುವುದು ಅಗತ್ಯವೇ… ನಮ್ಮ ಸ್ವಾಭಿಮಾನವನ್ನು ನಾವು ಎಷ್ಟೇ ಅಮೂಲ್ಯವಾದ ವಸ್ತುಗಳ ಜೊತೆಗೂ ಪಣಕ್ಕಿಡಬಾರದು.  ಒಬ್ಬರು ಇನ್ನೊಬ್ಬರ ಭಾವನೆಗಳಿಗೆ ಬೆಲೆ ನೀಡುವ ಜಾಗದಲ್ಲಿ ಮಾತ್ರವೇ ಸ್ವಾಭಿಮಾನಕ್ಕೆ ಬೆಲೆ ಇರುವುದು. ಇದನ್ನೇ ಡಾ.ಬಿ.ಅಂಬೇಡ್ಕರ್ ಅವರು ಹೇಳಿರೋದು, ನಿನಗೆ ಗೌರವ ಸಿಗದ ಜಾಗದಲ್ಲಿ ನಿನ್ನ ಚಪ್ಪಲಿಯನ್ನೂ ಬಿಡಬೇಡ”. ಇದೇ ಈ  ಲೇಖನದ ಆಶಯ, ಚಿಂತಿಸಿ, ಯೋಚಿಸಿ ಮುನ್ನಡೆಯಿರಿ.

ಇತ್ತೀಚಿನ ಸುದ್ದಿ

Exit mobile version