ಭ್ರಷ್ಟಾಚಾರ, ನಕಲಿ ಬಾರ್ ಲೈಸೆನ್ಸ್ ಕೇಸ್: ಬೆಳ್ಳಂಬೆಳಗ್ಗೆ ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ಇಡಿ (ED) ದಾಳಿ!
ಬೆಂಗಳೂರು: ರಾಜ್ಯ ಲೋಕೋಪಯೋಗಿ (PWD) ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಬೆಳ್ಳಂಬೆಳಗ್ಗೆ ದೊಡ್ಡ ಶಾಕ್ ನೀಡಿದ್ದಾರೆ. ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಸಚಿವರ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ಆರಂಭಿಸಿದ್ದಾರೆ.
ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ, ನಕಲಿ ಬಾರ್ ಲೈಸೆನ್ಸ್ ವಿತರಣೆ ಹಾಗೂ ಹವಾಲಾ ಹಣಕಾಸು ವ್ಯವಹಾರದ ಲಿಂಕ್‌ಗಳ ಆರೋಪದ ಹಿನ್ನೆಲೆಯಲ್ಲಿ ಈ ತನಿಖೆಯನ್ನು ತೀವ್ರಗೊಳಿಸಲಾಗಿದೆ.
ಕಳೆದ ಜೂನ್ ತಿಂಗಳಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರ ಆಪ್ತ ಸಂಬಂಧಿ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಯಾಗಿದ್ದ ವೈ. ಮಂಜುನಾಥ್ ಅವರ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಆ ಸಂದರ್ಭದಲ್ಲಿ ನೂರಾರು ಬೇನಾಮಿ ಬಾರ್ ಲೈಸೆನ್ಸ್, ನಗದು ಹಾಗೂ ಬರೋಬ್ಬರಿ 13.3 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಪತ್ತೆಯಾಗಿ ಭಾರಿ ಸಂಚಲನ ಮೂಡಿಸಿತ್ತು.
ಈ ಪ್ರಕರಣದ ಮುಂದುವರಿದ ಭಾಗವಾಗಿ, ವಿದೇಶಿ ಅಕ್ರಮ ಹಣ ಹಾಗೂ ಹವಾಲಾ ಜಾಲದ ಕೊಂಡಿ ಸಚಿವರಿಗೂ ತಲುಪಿರಬಹುದು ಎಂಬ ಶಂಕೆಯ ಮೇರೆಗೆ ಇದೀಗ ಸ್ವತಃ ಸಚಿವರ ಮನೆ ಮೇಲೆಯೂ ಇಡಿ ಅಧಿಕಾರಿಗಳು ದಾಳಿ ನಡೆಸಿ ತನಿಖೆ ಮುಂದುವರಿಸಿದ್ದಾರೆ. ಸಚಿವರ ಮನೆಯಲ್ಲಿ ಪ್ರಮುಖ ಆಸ್ತಿ ಪತ್ರಗಳು, ಬ್ಯಾಂಕ್ ಖಾತೆಗಳ ವಿವರ ಮತ್ತು ಮಹತ್ವದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದ್ದು, ಸಚಿವರ ನಿವಾಸದ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























