ಬೆದರಿಕೆ: ಆರ್ ಬಿಐ ಮತ್ತು ಇತರ ಬ್ಯಾಂಕುಗಳಿಗೆ ಬಂತು ಇಮೇಲ್ ಬಾಂಬ್ ಬೆದರಿಕೆ; ಹಣಕಾಸು ಸಚಿವರು ಮತ್ತು ಆರ್ ಬಿಐ ಗವರ್ನರ್ ರಾಜೀನಾಮೆಗೆ ಆಗ್ರಹ

27/12/2023

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಮ್ಮ ಸ್ಥಾನಗಳಿಂದ ಕೆಳಗಿಳಿಯದಿದ್ದರೆ ಮುಂಬೈನಲ್ಲಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) ಮತ್ತು ಎರಡು ಖಾಸಗಿ ಬ್ಯಾಂಕುಗಳನ್ನು ಸ್ಫೋಟಿಸುವುದಾಗಿ ಅಪರಿಚಿತನೋರ್ವ ಇಮೇಲ್ ನಲ್ಲಿ ಬೆದರಿಕೆ ಹಾಕಿದ್ದಾನೆ.

ಫೋರ್ಟ್ ನ ಆರ್ ಬಿಐ ನ್ಯೂ ಸೆಂಟ್ರಲ್ ಆಫೀಸ್ ಕಟ್ಟಡ, ಚರ್ಚ್ ಗೇಟ್‌ನಲ್ಲಿರುವ ಎಚ್ಡಿಎಫ್ಸಿ ಹೌಸ್ ಮತ್ತು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಲ್ಲಿರುವ ಐಸಿಐಸಿಐ ಬ್ಯಾಂಕ್ ಟವರ್ಸ್ ಸೇರಿದಂತೆ ನಗರದ ವಿವಿಧ ಸ್ಥಳಗಳಲ್ಲಿ 11 ಬಾಂಬ್ಗಳನ್ನು ಅಡಗಿಸಿಡಲಾಗಿದೆ ಎಂದು ಇಮೇಲ್‌ನಲ್ಲಿ ತಿಳಿಸಲಾಗಿದೆ. ಬೇಡಿಕೆಗಳನ್ನು ಈಡೇರಿಸದಿದ್ದರೆ ಬಾಂಬ್ ಗಳು ಸ್ಫೋಟಗೊಳ್ಳುತ್ತವೆ ಎಂದು ಈ ಇಮೇಲ್ ನಲ್ಲಿ ತಿಳಿಸಲಾಗಿದೆ.

ಆರ್ ಬಿಐ ಗವರ್ನರ್ , ಹಣಕಾಸು ಸಚಿವರು ಮತ್ತು ಇತರ ಕೆಲವು ಉನ್ನತ ಬ್ಯಾಂಕರ್ ಗಳು ಮತ್ತು ಸಚಿವರು ಭಾರತದ ಇತಿಹಾಸದಲ್ಲೇ ಅತಿದೊಡ್ಡ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಈ ಇಮೇಲ್‌ನಲ್ಲಿ ಆರೋಪಿಸಲಾಗಿದೆ. ಅವರ ಆರೋಪಗಳನ್ನು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳಿವೆ ಎಂದು ಇಮೇಲ್ ಹೇಳಿದೆ.

ಮುಂಬೈ ಪೊಲೀಸರು ಕಾರ್ಯಪ್ರವೃತ್ತರಾಗಿ ಇಮೇಲ್ ನಲ್ಲಿ ಉಲ್ಲೇಖಿಸಲಾದ ಎಲ್ಲಾ ಸ್ಥಳಗಳನ್ನು ಶೋಧಿಸಿದ್ದಾರೆ. ಆದರೆ ಯಾವುದೇ ಬಾಂಬ್ ಗಳು ಅಥವಾ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ. ಪೊಲೀಸರು ಕ್ರಿಮಿನಲ್ ಬೆದರಿಕೆಯ ಪ್ರಕರಣವನ್ನು ದಾಖಲಿಸಿದ್ದಾರೆ ಮತ್ತು ಇಮೇಲ್‌ನ ಮೂಲ ಮತ್ತು ಉದ್ದೇಶದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ಬ್ಯಾಂಕುಗಳು ಮತ್ತು ಆರ್ ಬಿಐ ಕಚೇರಿಯ ಸುತ್ತಲೂ ಭದ್ರತೆಯನ್ನು ಹೆಚ್ಚಿಸಿದ್ದಾರೆ.

ಇಮೇಲ್ ಬೆದರಿಕೆಯ ಬಗ್ಗೆ ಆರ್ ಬಿಐ ಮತ್ತು ಬ್ಯಾಂಕುಗಳು ಇಲ್ಲಿಯವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಹಣಕಾಸು ಸಚಿವರು ಮತ್ತು ಆರ್ ಬಿಐ ಗವರ್ನರ್ ಕೂಡ ಅವರ ರಾಜೀನಾಮೆಯ ಬೇಡಿಕೆಗೆ ಪ್ರತಿಕ್ರಿಯೆ ನೀಡಿಲ್ಲ.

ಇತ್ತೀಚಿನ ಸುದ್ದಿ

Exit mobile version