ಪತಿ, ಇಬ್ಬರು ಮಕ್ಕಳು ಸಾವನ್ನಪ್ಪಿದರು: ಆ ಮಹಿಳೆ ‘ಕಾಪಾಡಿ’ ಎಂದು ಕಿರುಚುತ್ತಲೇ ಇದ್ದಳು

gujarat bridge tragedy
10/07/2025

ಅಹಮದಾಬಾದ್(Mahanayaka): ಕಾಪಾಡಿ, ಕಾಪಾಡಿ ಎಂದು ಆಕೆ ಒಂದು ಗಂಟೆಗಿಂತಲೂ ಹೆಚ್ಚು ಕಾಲ ಕೂಗುತ್ತಿದ್ದಳು, ಅವರಿದ್ದ ವಾಹನ ನೀರಿನಡಿಗೆ ಮುಳುಗುತ್ತಿತ್ತು, ಗಂಡ, ಇಬ್ಬರು ಮಕ್ಕಳು ವಾಹನದಿಂದ ಹೊರ ಬರಲಾಗದೇ ಅಲ್ಲೇ ಕೊನೆಯುಸಿರೆಳೆದಿದ್ದರು.

ಇದು ಗುಜರಾತ್ ನ ಸೇತುವೆ ದುರಂತದಲ್ಲಿ ತನ್ನವರನ್ನು ಕಳೆದುಕೊಂಡ ಮಹಿಳೆಯ ಕರುಣಾಜನಕ ಕಥೆ. ಅಂದು ಮುಂಜಾನೆ 4 ವರ್ಷದ ವೇದಿಕಾ ಮತ್ತು ಅವಳ ಸಹೋದರ ನೈತಿಕ್, ತಂದೆ ರಮೇಶ್ ಪಡಿಯಾರ್ ಮತ್ತ ತಾಯಿ ಸೋನಾಲ್ ಪಡಿಯಾರ್ ತಮ್ಮ  ಗುಜರಾತ್‌ನ ವಡೋದರಾದಲ್ಲಿರುವ ಮನೆಯಿಂದ ಸುಮಾರು 280 ಕಿ.ಮೀ ದೂರದಲ್ಲಿರುವ ದೇವಸ್ಥಾನಕ್ಕೆ ತೆರಳಿದರು.

ಭಾವನಗರ ಜಿಲ್ಲೆಯ ಬಾಗ್ದಾನ ಬಾಪಾ ಸೀತಾರಾಮ ದೇವಸ್ಥಾನಕ್ಕೆ ತೆರಳಿ ದೇವರಿಗೆ ಸೇವೆ ಸಲ್ಲಿಸಿ, ಪ್ರಾರ್ಥನೆ ಮಾಡಿ ಹೊರಟರು. ಆದ್ರೆ ಅವರ ಪ್ರಾರ್ಥನೆಗೆ ದೇವರು ಈ ರೀತಿಯ  ಉತ್ತರ ನೀಡಲು ಕಾದಿದ್ದಾರೆ ಎನ್ನುವುದು ಅವರಿಗೆ ಆಗ ತಿಳಿದಿರಲಿಲ್ಲ. ಇವರಿದ್ದ ವ್ಯಾನ್  ಸುಮಾರು 40 ವರ್ಷಗಳಷ್ಟು ಹಳೆಯ ಸೇತುವೆಯಲ್ಲಿ ಮಹಿಸಾಗರ್ ನದಿಯನ್ನು ದಾಟುತ್ತಿದ್ದಾಗ ಏಕಾಏಕಿ ಸೇತುವೆ ಮುರಿದು ಬಿತ್ತು ಅದರೊಂದಿಗೆ ಈ ಕುಟುಂಬವಿದ್ದ ವಾಹನವೂ ನದಿಗೆ ಬಿತ್ತು. ವಾಹನ ನೀರಿನಲ್ಲಿ ಮುಳುಗಲು ಆರಂಭವಾಯಿತು. ತಾಯಿ ಸೋನಾಲ್ ವ್ಯಾನ್ ನ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದರು. ತನ್ನ ಪತಿ, ಇಬ್ಬರು ಮಕ್ಕಳನ್ನು ಅವರು ಹುಡುಕಾಡಿದರೂ ಅವರು ಸಿಗಲಿಲ್ಲ,  ಹೇಗೋ ವಾಹನದ ಮೇಲೆ ಬಂದು ನಿಂತುಕೊಂಡರು. ನಮ್ಮನ್ನು ಕಾಪಾಡಿ ಎಂದು ಕಿರುಚಿದರು.  ನನ್ನ ಪತಿ, ಮಕ್ಕಳು ವಾಹನದೊಳಗೆ ಸಿಲುಕಿದ್ದಾರೆ ಅವರನ್ನು ಕಾಪಾಡಿ ಎಂದು ಬೊಬ್ಬೆ ಹಾಕಿದರು. ಕೆಲವು ಗಂಟೆಗಳ ನಂತರ ಆಕೆಯನ್ನು ರಕ್ಷಣಾ ತಂಡ ಕಾಪಾಡಿತು. ಆಕೆ ಭಯಪಟ್ಟಂತೆಯೇ ಆಕೆಯ ಮಕ್ಕಳು ಹಾಗೂ ಪತಿ ಸಾವನ್ನಪ್ಪಿದ್ದರು.

ನಮ್ಮ ಕಾರಿನ ಮುಂದೆ ಇದ್ದ ವಾಹನ ನದಿಗೆ ಬಿದ್ದಿತ್ತು. ನಮ್ಮ ವ್ಯಾನ್ ಕೂಡ ನದಿಗೆ ಬಿತ್ತು.  ನಾನು ನೀರಿನ ಮೇಲೆ ಬರಲು ಯಶಸ್ವಿಯಾದಾಗ, ಸಹಾಯಕ್ಕಾಗಿ ಕಿರುಚಿದೆ. ನಾನು ಕಿರುಚುತ್ತಲೇ ಇದ್ದೆ ಮತ್ತು ನನ್ನ ಮಕ್ಕಳು ಮತ್ತು ಗಂಡನನ್ನು ಉಳಿಸಲು ಜನರನ್ನು ಕೇಳುತ್ತಿದ್ದೆ. ಒಂದು ಗಂಟೆಯ ನಂತರ ನನ್ನನ್ನು ರಕ್ಷಿಸಲಾಯಿತು. ನನ್ನನ್ನು ಹೊರತುಪಡಿಸಿ ಆ ವ್ಯಾನ್‌ನಲ್ಲಿದ್ದ ಎಲ್ಲರೂ  ಸಾವನ್ನಪ್ಪಿದ್ದರು ಎಂದು ಸೋನಲ್  ಕಣ್ಣೀರು ಹಾಕಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version