ಆ ಆಡಿಯೋ ನನ್ನದಲ್ಲ: ವೈರಲ್ ಆಡಿಯೋ ಬಗ್ಗೆ ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಸ್ಪಷ್ಟನೆ

sadananda gowda
30/06/2026

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ  ವಿಜಯೇಂದ್ರ ಅವರನ್ನು ಆ ಸ್ಥಾನದಿಂದ ಕೆಳಗಿಳಿಸಲು ಹೈಕಮಾಂಡ್‌ ಗೆ ಒತ್ತಾಯಿಸಲಾಗಿದೆ ಎನ್ನಲಾದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರ ಧ್ವನಿಯಿರುವ ಆಡಿಯೋವೊಂದು ಬಿಜೆಪಿ ಪಾಳೆಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಆದರೆ ಈ ಕುರಿತು ತಕ್ಷಣವೇ ಪ್ರತಿಕ್ರಿಯಿಸಿರುವ ಸದಾನಂದ ಗೌಡರು, “ಆ ಆಡಿಯೋಗೂ ನನಗೂ ಯಾವುದೇ ಸಂಬಂಧವಿಲ್ಲ, ಅದು ನನ್ನದಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ದೆಹಲಿ ಮಟ್ಟದ ಪ್ರಭಾವಿ ಬಿಜೆಪಿ ನಾಯಕರೊಬ್ಬರ ಜೊತೆ ಮಾಜಿ ಸಿಎಂ ಸದಾನಂದ ಗೌಡರು ಮಾತನಾಡಿದ್ದಾರೆ ಎನ್ನಲಾದ ಈ ಆಡಿಯೋ ಸಂಭಾಷಣೆಯಲ್ಲಿ, “ವಿಜಯೇಂದ್ರ ಅವರನ್ನು ಸದ್ಯಕ್ಕೆ ಅಂದರೆ ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್‌ವರೆಗೆ ಮುಂದುವರಿಯಲು ಬಿಡಿ. ತದನಂತರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದುಹಾಕಿ” ಎಂದು ಮನವಿ ಮಾಡಲಾಗಿದೆ. “ಇದೇನಾದರೂ ಈಗಲೇ ನಡೆದರೆ ಬಿಜೆಪಿ ಪಕ್ಷವು ಮತ್ತೆ ‘ಲಿಂಗಾಯತ ವಿರೋಧಿ’ ಎಂಬ ಟೀಕೆಗೆ ಗುರಿಯಾಗಬಹುದು ಮತ್ತು ಇದರಿಂದ ಪಕ್ಷಕ್ಕೆ ದೊಡ್ಡ ಮಟ್ಟದ ಹಾನಿಯಾಗುವ ಅಪಾಯವಿದೆ” ಎಂಬ ಆತಂಕವನ್ನು ಆಡಿಯೋದಲ್ಲಿ ವ್ಯಕ್ತಪಡಿಸಲಾಗಿದೆ.

ಈ ಗಂಭೀರ ವಿಷಯದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸದಾನಂದ ಗೌಡರು, “ನನ್ನದಲ್ಲದ ಆಡಿಯೋ ಅಥವಾ ವಿಡಿಯೋಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಆ ಆಡಿಯೋದ ಸತ್ಯಾಸತ್ಯತೆ ಏನೆಂಬುದನ್ನು ಮಾಧ್ಯಮಗಳೇ ಪತ್ತೆಹಚ್ಚಲಿ ಹಾಗೂ ತನಿಖೆ ಮಾಡಲಿ. ಸತ್ಯಾಂಶ ಏನೆಂಬುದು ಹೊರಬರಲಿ ಎಂದು ನಾನೂ ಬಯಸುತ್ತೇನೆ. ಅದನ್ನು ಬಿಟ್ಟು ಸುಮ್ಮನೆ ಚಾರಿತ್ರ್ಯ ಹರಣ ಮಾಡುವುದು ಬೇಡ” ಎಂದು ಆಕ್ರೋಶ ಹೊರಹಾಕಿದ್ದಾರೆ.

“ಪಕ್ಷದಲ್ಲಿ ಏನೇನು ಬದಲಾವಣೆಗಳಾಗಬೇಕು ಎಂಬುದನ್ನು ನಾನು ಈಗಾಗಲೇ ಪಕ್ಷದ ಆಂತರಿಕ ವೇದಿಕೆಯಲ್ಲಿ ಹಾಗೂ ಕೋರ್ ಕಮಿಟಿ ಸಭೆಗಳಲ್ಲಿ ಮುಕ್ತವಾಗಿ ಚರ್ಚಿಸಿದ್ದೇನೆ. ನಾನು ಯಾವುದೇ ಅಧಿಕಾರ ಅಥವಾ ಸ್ಥಾನಮಾನದ ಆಕಾಂಕ್ಷಿಯಲ್ಲ. ಒಂದು ವೇಳೆ ಹೈಕಮಾಂಡ್ ಈ ಬಗ್ಗೆ ನನ್ನನ್ನು ಕೇಳಿದರೆ ಮಾತ್ರ ನಾನು ಉತ್ತರಿಸುತ್ತೇನೆ.”

— ಡಿ.ವಿ. ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ


ಇದೇ ಸಂದರ್ಭದಲ್ಲಿ ತಮ್ಮ ವಿರುದ್ಧ ವಾಗ್ದಾಳಿ ನಡೆಸಿದ್ದ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ವಿರುದ್ಧವೂ ಡಿ.ವಿ.ಎಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ವಿಶ್ವನಾಥ್ ಬಿಡಿಎಯನ್ನು ಮುಳುಗಿಸಿದವರು. ನಾನು ಒಕ್ಕಲಿಗ ಅಲ್ಲ ಎಂದು ಅವರು ಹೇಳಿದ್ದಾರೆ, ಆದರೆ ಅವರಿಗೆ ದಕ್ಷಿಣ ಕರ್ನಾಟಕದ ಪರಿಸ್ಥಿತಿಯೇ ಗೊತ್ತಿಲ್ಲ. ವಿಶ್ವನಾಥ್ ದುಡ್ಡಿನ ಅಮಲಿನಲ್ಲಿ ಗೂಂಡಾಗಿರಿ ಮಾಡಿಕೊಂಡು ಬಂದವರು. ನಾನು ಕಳ್ಳನಲ್ಲ, ಕಳ್ಳನಾಗಿದ್ದರೆ ಬಾಗಿಲು ಹಾಕಿಕೊಂಡು ಮನೆಯಲ್ಲಿ ಕೂರುತ್ತಿದ್ದೆ” ಎಂದು ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version