ಹೃದಯಾಘಾತ: ಗುಡ್ಡದಿಂದ ಜಾರಿ ಬಿದ್ದು 1 ವರ್ಷ ವಯಸ್ಸಿನ ಮರಿ ಆನೆ ಸಾವು
ಸುಳ್ಯ: ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಗಡಿಭಾಗದಲ್ಲಿರುವ ತೊಡಿಕಾನ ಗ್ರಾಮದ ಹರ್ಲಡ್ಕ ಸಮೀಪದ ರಬ್ಬರ್ ತೋಟವೊಂದರಲ್ಲಿ ಸುಮಾರು ಒಂದು ವರ್ಷ ಪ್ರಾಯದ ಮರಿ ಹೆಣ್ಣಾನೆಯೊಂದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಭಾಗಮಂಡಲದ ಮೀಸಲು ಅರಣ್ಯ ಪ್ರದೇಶದಿಂದ ಆಹಾರ ಅರಸುತ್ತಾ ಅಥವಾ ಸಂಚಾರದ ವೇಳೆ ಕಾಡಾನೆಗಳ ಹಿಂಡು ಹರ್ಲಡ್ಕ ಅರಣ್ಯದಂಚಿನ ಚಂದ್ರಶೇಖರ ಗೌಡ ಎಂಬವರ ರಬ್ಬರ್ ತೋಟಕ್ಕೆ ಆಗಮಿಸಿತ್ತು. ಬಳಿಕ ಹಿಂಡು ಅರಣ್ಯದತ್ತ ಮರಳುವ ಸಂದರ್ಭದಲ್ಲಿ ಕಡಿದಾದ ಗುಡ್ಡವನ್ನು ಹತ್ತುವಾಗ, ಈ ಮರಿ ಆನೆ ಕಾಲು ಜಾರಿ ಕೆಳಕ್ಕೆ ಬಿದ್ದಿರುವ ಸಾಧ್ಯತೆಯಿದೆ. ಕಡಿದಾದ ಗುಡ್ಡದಿಂದ ಜಾರಿ ಬಿದ್ದ ಪರಿಣಾಮ ಉಂಟಾದ ತೀವ್ರ ಆಘಾತ ಅಥವಾ ಹೃದಯಾಘಾತದಿಂದ ಮರಿಯಾನೆ ಮೃತಪಟ್ಟಿರಬಹುದು ಎಂದು ಸುಳ್ಯ ವಲಯ ಅರಣ್ಯಾಧಿಕಾರಿ ನಿರಂಜನ್ ಶೆಟ್ಟಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಡಿಎಫ್ ಒ ವೆಂಕಟೇಶ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಪ್ರಶಾಂತ್ ಕುಮಾರ್ ಪೈ, ವಲಯ ಅರಣ್ಯಾಧಿಕಾರಿ ನಿರಂಜನ್ ಶೆಟ್ಟಿ ಹಾಗೂ ಆರಂಬೂರಿನ ಇಟಿಎಫ್ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸುಳ್ಯ ಪಶು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ನಿತಿನ್ ಪ್ರಭು ಅವರ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಆನೆಯ ದೇಹದ ಮೇಲೆ ಯಾವುದೇ ಬಾಹ್ಯ ಗಾಯದ ಗುರುತುಗಳು ಪತ್ತೆಯಾಗಿಲ್ಲ. ಗುಡ್ಡದಿಂದ ಜಾರಿ ಬಿದ್ದ ಪರಿಣಾಮ ಉಂಟಾದ ಆಂತರಿಕ ಆಘಾತವೇ ಸಾವಿಗೆ ಕಾರಣವೆಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದ್ದು, ನಿಖರವಾದ ವರದಿ ಸದ್ಯದಲ್ಲೇ ಲಭ್ಯವಾಗಲಿದೆ.

























