ಅಕ್ಟೋಬರ್ 10ರವರೆಗೆ ದೇಶದ 20 ರಾಜ್ಯಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಎಚ್ಚರಿಕೆ
ನವದೆಹಲಿ: ಭಾರತದಲ್ಲಿ ಮುಂಗಾರು ಅಂತ್ಯಗೊಂಡಿದ್ದರೂ, ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಹಾಗೂ ಚಂಡಮಾರುತದ ಪರಿಚಲನೆಯ ಪರಿಣಾಮವಾಗಿ ದೇಶದ ಕನಿಷ್ಠ 20 ರಾಜ್ಯಗಳಲ್ಲಿ ಅಕ್ಟೋಬರ್ 5ರಿಂದ ಅಕ್ಟೋಬರ್ 10ರವರೆಗೆ ಮಳೆ, ಗುಡುಗು, ಸಿಡಿಲು ಮತ್ತು ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.
ಈಶಾನ್ಯ ಬಿಹಾರದಿಂದ ವಾಯುವ್ಯ ಬಂಗಾಳ ಕೊಲ್ಲಿಯವರೆಗೆ ‘ಟ್ರಫ್’ (ಕಡಿಮೆ ಒತ್ತಡದ ವಲಯ) ವ್ಯಾಪಿಸಿರುವುದು ಹಾಗೂ ಮನ್ನಾರ್ ಕೊಲ್ಲಿ ಮತ್ತು ದಕ್ಷಿಣ ತಮಿಳುನಾಡು ಕರಾವಳಿಯ ಸಮೀಪದ ವಾತಾವರಣದ ಬದಲಾವಣೆಯಿಂದಾಗಿ ಈ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.
ದೆಹಲಿ-ಎನ್ ಸಿಆರ್, ಹರಿಯಾಣ, ಪಂಜಾಬ್ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ ಅಕ್ಟೋಬರ್ 6 ರಿಂದ 10ರವರೆಗೆ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.
ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಅಕ್ಟೋಬರ್ 5 ರಿಂದ 10ರವರೆಗೆ ಗುಡುಗು, ಮಿಂಚು ಹಾಗೂ ಗಂಟೆಗೆ 40-60 ಕಿ.ಮೀ ವೇಗದ ಗಾಳಿಯೊಂದಿಗೆ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಜಮ್ಮು–ಕಾಶ್ಮೀರದಲ್ಲೂ ಮಳೆ ಮುಂದುವರಿಯಲಿದೆ.
ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಸಿಕ್ಕಿಂನಲ್ಲಿ ಅಕ್ಟೋಬರ್ 10ರವರೆಗೆ ಮಳೆ ಮುಂದುವರಿಯಲಿದೆ. ಉಪ-ಹಿಮಾಲಯದ ಪಶ್ಚಿಮ ಬಂಗಾಳ ಹಾಗೂ ಅಸ್ಸೋಂ, ಮೇಘಾಲಯ, ಅರುಣಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಮಧ್ಯಪ್ರದೇಶ ಮತ್ತು ಛತ್ತೀಸ್ ಗಢದಲ್ಲಿ ಅಕ್ಟೋಬರ್ 6 ರಿಂದ 10ರವರೆಗೆ ಮಳೆಯಾಗಲಿದೆ.
ಕರ್ನಾಟಕ, ಕರಾವಳಿ ಆಂಧ್ರಪ್ರದೇಶ, ರಾಯಲಸೀಮೆ, ತಮಿಳುನಾಡು, ಪುದುಚೇರಿ, ಕಾರೈಕಲ್ ಮತ್ತು ಕೇರಳದಲ್ಲೂ ಮಳೆಯಾಗುವ ನಿರೀಕ್ಷೆಯಿದೆ. ತಮಿಳುನಾಡು ಮತ್ತು ಪುದುಚೇರಿಯಲ್ಲಿ ಗಾಳಿಯ ರಭಸ ಗಂಟೆಗೆ 50-60 ಕಿ.ಮೀ ವರೆಗೆ ತಲುಪಬಹುದು.
ಮಿಂಚು ಮತ್ತು ಗುಡುಗಿನ ಆರ್ಭಟವಿರುವಾಗ ಸಾರ್ವಜನಿಕರು ಬಯಲು ಪ್ರದೇಶಗಳು, ಮರಗಳು ಹಾಗೂ ವಿದ್ಯುತ್ ಕಂಬಗಳಿಂದ ದೂರವಿರಬೇಕು. ನೀರು ನಿಂತಿರುವ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಪ್ರಯಾಣಿಸುವಾಗ ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ.

























