ನಟ ಗಣೇಶ್ ಗೆ ಹೈ ತಾತ್ಕಾಲಿಕ ರಿಲೀಫ್: ಮನೆ ಕಟ್ಟಲು ಅನುಮತಿ

ganesh
02/09/2023

ಚಾಮರಾಜನಗರ: ಚಿತ್ರನಟ ಗಣೇಶ್ ಅವರಿಗೆ ಮನೆ ಕಟ್ಟಲು ಹೈಕೋರ್ಟ್ ಅನುಮತಿಯನ್ನು ಕೊಟ್ಟಿದ್ದು ಸದ್ಯ ಗೋಲ್ಡನ್ ಸ್ಟಾರ್ ಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದಂತಾಗಿದೆ.

ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಪರಿಸರ ಸೂಕ್ಷ ವಲಯಕ್ಕೆ ಒಳಪಡುವ ಜಕ್ಕಹಳ್ಳಿ ಗ್ರಾಮದಲ್ಲಿ ನಿರ್ಮಾಣ ಮಾಡುತ್ತಿರುವ ಮನೆ ಕಾಮಗಾರಿಯನ್ನು ಮುಂದುವರೆಸಲು ನ್ಯಾ.ಕೃಷ್ಣ ದೀಕ್ಷಿತ್ ಅನುಮತಿ ಕೊಟ್ಟಿದ್ದಾರೆ.
ಸುಪ್ರೀಂ ಕೋರ್ಟ್ ನ ತೀರ್ಪನ್ನು ಉಲ್ಲೇಖಿಸಿ ನಟ ಗಣೇಶ್ ಅವರ ಪರ ವಕೀಲರು ವಾದ ಮಾಡಿದ ಹಿನ್ನೆಲೆ ಜೊತೆಗೆ ನಿರ್ಮಾಣ ಮಾಡುತ್ತಿರುವ ಕಟ್ಟಡ ವಾಸಕ್ಕೆ ಮಾತ್ರವಾಗಿದ್ದು ಯಾವುದೇ ವಾಣಿಜ್ಯ ಬಳಕೆಗಲ್ಲ ಹಾಗೂ ಅಂತಿಮ ಆದೇಶ ಅರ್ಜಿದಾರರ ವಿರುದ್ಧ ಬಂದರೆ ಆದೇಶದಂತೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರಿಂದ ಅಂತಿಮ ಆದೇಶಕ್ಕೆ ಒಳಪಟ್ಟಿರಲಿದೆ ಎಂದು ತಿಳಿಸಿ ನಟ ಗಣೇಶ್ ಅವರಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ನ್ಯಾಯಾಲಯ ಅನುಮತಿ ಕೊಟ್ಟಿದೆ.

ಏನಿದು ಮನೆ ನಿರ್ಮಾಣ ವಿವಾದ:

ಪರಿಸರ ಸೂಕ್ಷ್ಮ ವಲಯಕ್ಕೆ ಒಳಪಡುವ ಜಕ್ಕಹಳ್ಳಿ ಗ್ರಾಮದಲ್ಲಿ ನಟ ಗಣೇಶ್ ತಾತ್ಕಾಲಿಕ ಮನೆ ನಿರ್ಮಾಣಕ್ಕೆ ಅನುಮತಿ ಪಡೆದು ಬೃಹತ್ ಶಾಶ್ವತ ಕಟ್ಟಡ ನಿರ್ಮಿಸಿರುವ ಆರೋಪ ಕೇಳಿಬಂದಿದೆ. ಇದಕ್ಕೆ ಪರಿಸರವಾದಿಗಳು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ ಮನೆ ನಿರ್ಮಾಣ ಕಾಮಗಾರಿ ನಿಲ್ಲಿಸಿ ಪರಿಸರ ಸೂಕ್ಷ ವಲಯ ನಿರ್ವಹಣಾ ಪ್ರಾಧಿಕಾರಕ್ಕೆ ಕಟ್ಟಡ ನೀಲಿನಕ್ಷೆ ಹಾಜರು ಪಡಿಸಬೇಕೆಂದು ಅರಣ್ಯ ಇಲಾಖೆ ನೋಟಿಸ್ ಕೊಟ್ಟಿತ್ತು. ಇದನ್ನು ಪ್ರಶ್ನಿಸಿ ನಟ ಗಣೇಶ್ ಹೈ ಮೆಟ್ಟಿಲು ಹತ್ತಿದ್ದರು. ಈಗ ಗಣೇಶ್ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದ್ದು ಮುಂದಿನ ವಿಚಾರಣೆ ಸೆ.12ಕ್ಕೆ ಮುಂದೂಡಿಕೆಯಾಗಿದೆ.

ಇತ್ತೀಚಿನ ಸುದ್ದಿ

Exit mobile version