ದಕ್ಷಿಣ ಕನ್ನಡ: ಕೋಮುವಾದಿ ಅಜೆಂಡಾ, ಮತೀಯ ಹಿಂಸೆ ವಿರುದ್ಧ ರಮಾನಾಥ ರೈ ನೇತೃತ್ವದಲ್ಲಿ ಮಹತ್ವದ ಸಭೆ

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನ ಜೀವನವನ್ನು ಅಸಹನೀಯಗೊಳಿಸಿರುವ ಕೋಮುವಾದಿ ಅಜೆಂಡಾ, ಮತೀಯ ಹಿಂಸೆಗಳ ವಿರುದ್ದ ಸಂಘಟಿತವಾಗಿ ಕೆಲಸ ಮಾಡುವ ಉದ್ದೇಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಸಮಾನ ಮನಸ್ಕ ಪಕ್ಷ, ಸಂಘಟನೆಗಳು ಒಂದಾಗಿ ರಚಿಸಿಕೊಂಡಿರುವ “ದಕ್ಷಿಣ ಕನ್ನಡ ಜಿಲ್ಲಾ ಜಾತ್ಯಾತೀತ ಪಕ್ಷಗಳು ಮತ್ತು ಸಮಾನ ಮನಸ್ಕ ಸಂಘಟನೆಗಳ ಜಂಟಿ ವೇದಿಕೆ, ಮಂಗಳೂರು” ಇದರ ಮಹತ್ವದ ಸಭೆಯು ಇಂದು ವೇದಿಕೆಯ ಅಧ್ಯಕ್ಷರಾದ ಮಾಜಿ ಸಚಿವ ಬಿ ರಮಾನಾಥ ರೈಯವರ ಅಧ್ಯಕ್ಷತೆಯಲ್ಲಿ ಮಂಗಳೂರಿನ ಕದ್ರಿ ಸರ್ಕ್ಯೂಟ್ ಹೌಸ್ ನಲ್ಲಿ ನಡೆಯಿತು.
ಬಿಜೆಪಿ ಸರಕಾರದ ಅವಧಿಯಲ್ಲಿ ಸರಕಾರದ ಬೆಂಬಲದೊಂದಿಗೆ ಅವ್ಯಾಹತವಾಗಿ ನಡೆದ ಕೋಮು ಪ್ರಚೋದಕ ಕೃತ್ಯಗಳು, ಸರಣಿ ಕೊಲೆಗಳ ಕುರಿತು ಸಭೆಯು ಗಹನವಾದ ಚರ್ಚೆ ನಡೆಸಿತು. ರಾಜ್ಯ ಹಾಗೂ ದೇಶದ ಎಲ್ಲಿಯೂ ಘಟಿಸದ ಮತೀಯ ದ್ವೇಷದ ಸರಣಿ ಕೊಲೆಗಳು ಎರಡು ದಶಕಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆದಿರುವುದು, ಹಾಗೂ ಅಂತಹ ಕೊಲೆಗಳು ಜಿಲ್ಲೆಯಲ್ಲಿ ಮತೀಯ ದ್ವೇಷ, ಉದ್ವಿಗ್ನತೆ, ಧ್ರುವೀಕರಣವನ್ನು ಏರುಗತಿಗೆ ಕೊಂಡೊಯ್ದಿರುವ ಕುರಿತು ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.
ಬಹುತೇಕ ರಾಜಕೀಯ ಬೆಂಬಲದಿಂದ ನಡೆದಿರುವ ಇಂತಹ ಕೊಲೆಗಳಲ್ಲಿ ಹೆಚ್ಚಿನ ಪ್ರಕರಣಗಳಲ್ಲಿ ಸರಿಯಾದ ತನಿಖೆ ನಡೆಯದಿರುವುದು, ಕೊಲೆಯ ಹಿಂದಿರುವ ಶಕ್ತಿಗಳ ಪಾತ್ರ ಬಹಿರಂಗಗೊಳ್ಳದಿರುವುದು, ನೈಜ ಕೊಲೆಗಾರರು ತಪ್ಪಿಸಿಕೊಂಡಿರುವುದು, ಅಂತಹ ಶಕ್ತಿಗಳು ಕಾನೂನು ಕ್ರಮಕ್ಕೆ ಒಳಗಾಗದಿರುವುದು, ಇಂತಹ ಕೊಲೆಗಳ ಸರಣಿ ತಡೆ ರಹಿತವಾಗಿ ಮುಂದುವರಿಯಲು ಪ್ರಧಾನ ಕಾರಣ. ಮತೀಯ ದ್ವೇಷದ ಕೊಲೆಗಳ ನೈಜ ಅಪರಾಧಿಗಳು, ಪಿತೂರಿದಾರರು, ಸಂಪನ್ಮೂಲ ಒದಗಿಸುವವರು ಕಾನೂನಿನ ಬಲೆಗೆ ಬಿದ್ದರೆ ಜಿಲ್ಲೆಯಲ್ಲಿ ಮತೀಯ ಹಿಂಸೆಗೆ ಬಹುತೇಕ ಕಡಿವಾಣ ಬೀಳಲಿದೆ. ತಮ್ಮ ಕುಟುಂಬದ ಸದಸ್ಯರನ್ನು ಕಳೆದು ಕೊಂಡ ಸಂತ್ರಸ್ತರಿಗೆ ನ್ಯಾಯ ಒದಗಲಿದೆ. ಅದಕ್ಕಾಗಿ, ಕಳೆದ ಎರಡು ದಶಕಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಮತೀಯ ದ್ವೇಷದಿಂದ ನಡೆದಿರುವ ಎಲ್ಲಾ ಕೊಲೆಗಳನ್ನು ಮರು ತನಿಖೆಗೆ ಒಳಪಡಿಸಬೇಕು, ತನಿಖೆಗಾಗಿ ವಿಶೇಷ ತನಿಖಾ ತಂಡ (SIT) ರಚಿಸಬೇಕು ಎಂದು ಸರಕಾರವನ್ನು ಒತ್ತಾಯಿಸಲು ನಿರ್ಧರಿಸಲಾಯಿತು.
ಕೋಮುವಾದ, ಮತೀಯ ದ್ವೇಷ, ಧಾರ್ಮಿಕ ಪೂರ್ವಾಗ್ರಹಗಳನ್ನು ಕಡಿಮೆಗೊಳಿಸಲು ಸರಕಾರವು ತಳಮಟ್ಟದಿಂದಲೆ ಮಾಡಬೇಕಾದ ಕೆಲಸಗಳ ಕುರಿತು ಹೆಚ್ಚಿನ ಸಲಹೆಗಳು ಬಂದವು. ಮತೀಯ ಪೂರ್ವಾಗ್ರಹಕ್ಕೆ ಒಳಗಾಗಿರುವ ಸಾಂಸ್ಕತಿಕ ರಂಗ, ಶೈಕ್ಷಣಿಕ ರಂಗಗಳನ್ನು ಸರಿಪಡಿಸಲು ದಕ್ಷಿಣ ಕನ್ನಡ ಜಿಲ್ಲೆಗೆ ರಾಜ್ಯ ಸರಕಾರ ವಿಶೇಷ ಯೋಜನೆ ಸಿದ್ದಪಡಿಸಬೇಕು, ಪೊಲೀಸ್, ಕಂದಾಯ, ಆಡಳಿತ ಇಲಾಖೆಗಳಲ್ಲಿ ಅಮೂಲಾಗ್ರ ಬದಲಾವಣೆ ತರುವುದು, ಅಧಿಕಾರಿಗಳು, ಸಿಬ್ಬಂದಿಗಳಿಗೆ ಕೋಮುವಾದ, ಜಾತ್ಯಾತೀತತೆ ಕುರಿತು ಸರಿಯಾದ ಅರಿವು ಮೂಡಿಸುವ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವುದು, ಆ್ಯಂಟಿ ಕಮ್ಯೂನಲ್ ವಿಂಗ್ ಗೆ ದಕ್ಷ ಅಧಿಕಾರಿ, ಸಿಬ್ಬಂದಿಗಳನ್ನು ನೇಮಿಸುವುದು, ಕೋಮುವಾದಿ ಚಟುವಟಿಕೆಗೆ ಸಂಬಂಧಿಸಿ ಜಿಲ್ಲಾಡಳಿತಕ್ಕೆ ಸಹಕಾರ ನೀಡಲು ಸಿವಿಲ್ ವಾಚ್ ಸಮಿತಿ ರಚಿಸುವುದು, ದ್ವೇಷ ಭಾಷಣ, ಮತೀಯ ಸಂಘಟನೆಗಳನ್ನು ಹದ್ದು ಬಸ್ತಿನಲ್ಲಿಡಲು ದೃಢ ಕ್ರಮಗಳನ್ನು ರಾಜ್ಯ ಸರಕಾರ ಕೈಗೊಳ್ಳುವಂತಾಗಬೇಕು ಎಂದು ಸಭೆ ಅಭಿಪ್ರಾಯ ಪಟ್ಟಿತು .
ಈ ಎಲ್ಲಾ ಬೇಡಿಕೆ, ಪ್ರಸ್ತಾವನೆ, ಸಲಹೆಗಳನ್ನು ಒಳಗೊಂಡ ಮನವಿಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯರೊಂದಿಗೆ ವಿಶೇಷ ಸಭೆ ನಡೆಸಬೇಕು. ಅದಕ್ಕಾಗಿ ಜಿಲ್ಲಾ ಮಟ್ಟದ ನಿಯೋಗವನ್ನು ಮುಖ್ಯಮಂತ್ರಿಗಳ ಬಳಿಗೆ ಕೊಂಡಯ್ಯಲು ಸಭೆ ತೀರ್ಮಾನಿಸಿತು.
ಸಭೆಯ ಅಧ್ಯಕ್ಷತೆಯನ್ನು ಬಿ.ರಮಾನಾಥ ರೈ ವಹಿಸಿದ್ದರು. ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ಪ್ರಸ್ಥಾವನೆ ಮಂಡಿಸಿದರು. ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ ಶೇಖರ್, ಹಂಪಿ ವಿ ವಿಯ ವಿಶ್ರಾಂತ ಪ್ರೊಫೆಸರ್ ಡಾ. ಚಂದ್ರ ಪೂಜಾರಿ, ಹಿರಿಯ ದಲಿತ ನಾಯಕ ಎಂ ದೇವದಾಸ್, ಕೊಂಕಣಿ ಅಕಾಡೆಮಿಯ ಮಾಜಿ ಅಧ್ಯಕ್ಷ ರಾಯ್ ಕ್ಯಾಸ್ಟಲಿನೊ, ರಾಜ್ಯ ರೈತ ಸಂಘದ ಪ್ರೇಮನಾಥ ಶೆಟ್ಟಿ, ಪ್ರಾಂತ ರೈತ ಸಂಘದ ಕೃಷ್ಣಪ್ಪ ಸಾಲ್ಯಾನ್, ಕಾರ್ಮಿಕ ಮುಂದಾಳುಗಳಾದ ಸುನಿಲ್ ಕುಮಾರ್ ಬಜಾಲ್, ಬಿ ಎಮ್ ಭಟ್, ಸೀತಾರಾಮ ಬೇರಿಂಜೆ, ತಿಮ್ಮಪ್ಪ ಕಾವೂರು, ಬೊಂಡಾಲ ಚಿತ್ತರಂಜನ್ ಶೆಟ್ಟಿ, ಡಿ ಎಸ್ ಎಸ್ ಜಿಲ್ಲಾ ಸಂಚಾಲಕ ರಘು ಎಕ್ಕಾರು, ಮುಸ್ಲಿಂ ವರ್ತಕರ ಸಂಘದ ಯಾಸೀನ್ ಕುದ್ರೋಳಿ, ಚಿಂತಕರಾದ ಎಂ ಜಿ ಹೆಗ್ಡೆ, ಡಾ. ಉದಯ ಕುಮಾರ್ ಇರ್ವತ್ತೂರು, ಮಾಜಿ ಮೇಯರ್ ಕೆ ಅಶ್ರಫ್, ಮಾಜಿ ಉಪಮೇಯರ್ ಗಳಾದ ಪುರುಷೋತ್ತಮ ಚಿತ್ರಾಪುರ,ಮುಹಮ್ಮದ್ ಕುಂಜತ್ತಬೈಲ್, ಡಿವೈಎಫ್ಐ ನ ಸಂತೋಷ್ ಬಜಾಲ್, ಮನೋಜ್ ವಾಮಂಜೂರು, ಪಾಲಿಕೆ ವಿರೋಧ ಪಕ್ಷದ ನಾಯಕ ನವೀನ್ ಡಿ ಸೋಜ, ಮಹಿಳಾ ನಾಯಕಿಯರಾದ ಜಯಂತಿ ಶೆಟ್ಟಿ, ಭಾರತಿ ಬೋಳಾರ, ಸರೋಜಿನಿ, ಸಾಮರಸ್ಯ ಮಂಗಳೂರಿನ ಮಂಜುಳಾ ನಾಯಕ್, ಖ್ಯಾತ ನ್ಯಾಯವಾದಿಗಳಾದ ಯಶವಂತ ಮರೋಳಿ, ದಿನೇಶ್ ಹೆಗ್ಡೆ ಉಳೆಪಾಡಿ, ರಂಗಕರ್ಮಿಗಳಾ ಪ್ರಭಾಕರ ಕಾಪಿಕಾಡ್, ವಿದ್ದು ಉಚ್ಚಿಲ್, ಯುವ ಕಾಂಗ್ರೆಸ್ ನ ಲುಕ್ಮಾನ್ ಬಂಟ್ವಾಳ, ಬ್ಯಾರಿ ಅಕಾಡೆಮಿಯ ಮಾಜಿ ಅಧ್ಯಕ್ಷ ಮಹಮ್ಮದ್ ಹನೀಫ್, ಕಾಂಗ್ರೆಸ್ ಮುಂದಾಳುಗಳಾದ ಸಾಹುಲ್ ಹಮೀದ್, ಶಬೀರ್ ಸಿದ್ದಕಟ್ಟೆ, ಮುಸ್ಲಿಂ ಯುವಜನ ಪರಿಷತ್ ನ ಅಶ್ರಫ್ ಕಲ್ಲೇಗ, ವಿದ್ಯಾರ್ಥಿ ಸಂಘಟನೆಯ ರೇವಂತ್ ಕದ್ರಿ, ವಿನೀತ್ ದೇವಾಡಿಗ ಸೇರಿದಂತೆ ವಿವಿಧ ಸಂಘಟನೆಗಳು ಹಲವು ಪ್ರತಿನಿಧಿಗಳು ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw