4:45 AM Wednesday 22 - October 2025

ಮಳೆಗೆ ಭಾರತ – ಪಾಕ್ ಪಂದ್ಯ ರದ್ದು: ಸೂಪರ್ 4 ಹಂತಕ್ಕೇರಿದ ಪಾಕಿಸ್ತಾನ

02/09/2023

ಕೋಟಿ ಕೋಟಿ ನಿರೀಕ್ಷೆ ಹುಸಿಯಾಯಿತು. ಕುತೂಹಲವೆಲ್ಲವೂ ನೀರಲ್ಲಿ ಹೋಮ ಮಾಡಿದಂತಾಯಿತು. ಹೌದು. ಭಾರತ – ಪಾಕಿಸ್ತಾನ ನಡುವಿನ ಪಂದ್ಯವು ಮಳೆಗೆ ಬಲಿಯಾಯಿತು. ಶ್ರೀಲಂಕಾದ ಪಲ್ಲೆಕೆಲೆ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದ ದ್ವಿತೀಯ ಇನಿಂಗ್ಸ್​ ವೇಳೆ ಧಾರಾಕಾರ ಮಳೆ ಸುರಿದಿದ್ದರಿಂದ ಪಂದ್ಯವನ್ನು ರದ್ದುಗೊಳಿಸಲಾಯಿತು. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ ಪಾಕ್ ವೇಗಿಗಳ ಮಾರಕ ಬೌಲಿಂಗ್ ಮುಂದೆ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು.

ಆರಂಭಿಕ ಆಟಗಾರ ರೋಹಿತ್ ಶರ್ಮಾ (11 ರನ್) ಶಾಹೀನ್ ಅಫ್ರಿದಿ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಇನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ (4 ರನ್ ) ಕೂಡ ಅಫ್ರಿದಿಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಶುಭ್​ಮನ್ ಗಿಲ್ (6 ರನ್ ) ವಿಕೆಟ್ ಪಡೆದು ಹ್ಯಾರಿಸ್ ರೌಫ್ ಪಾಕ್ ತಂಡಕ್ಕೆ 3ನೇ ಯಶಸ್ಸು ತಂದುಕೊಟ್ಟರು. ಆ ನಂತರ ಬಂದ ಶ್ರೇಯಸ್ ಅಯ್ಯರ್ ವೇಗವಾಗಿ 14 ರನ್ ಬಾರಿಸಿದರೂ ಹೆಚ್ಚು ಹೊತ್ತು ನಿಲ್ಲಲಿಲ್ಲ.

ಈ ಹಂತದಲ್ಲಿ ಜೊತೆಗೂಡಿದ ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ 5ನೇ ವಿಕೆಟ್​ಗೆ 138 ರನ್​ಗಳ ಜೊತೆಯಾಟವಾಡಿದರು. 81 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 9 ಫೋರ್​ಗಳೊಂದಿಗೆ 82 ರನ್ ಬಾರಿಸಿ ಇಶಾನ್ ಕಿಶನ್ ಹ್ಯಾರಿಸ್ ಎಸೆತದಲ್ಲಿ ಔಟಾದರು.

ಇದರ ಬೆನ್ನಲ್ಲೇ 90 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ 87 ರನ್​ ಬಾರಿಸಿದ್ದ ಹಾರ್ದಿಕ್ ಪಾಂಡ್ಯ ಕೂಡ ಶಾಹೀನ್ ಅಫ್ರಿದಿ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಇತ್ತ ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ವಿಕೆಟ್ ಸಿಗುತ್ತಿದ್ದಂತೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಪಾಕ್ ಬೌಲರ್​ಗಳು ಆ ಬಳಿಕ ಬಂದ ರವೀಂದ್ರ ಜಡೇಜಾ (14) ಬೇಗನೆ ಔಟ್ ಮಾಡಿದರು.

ಇನ್ನು ಶಾರ್ದೂಲ್ ಠಾಕೂರ್ (3), ಕುಲ್ದೀಪ್ ಯಾದವ್ (4) ನಸೀಮ್ ಶಾ ಎಸೆತಗಳಲ್ಲಿ ವಿಕೆಟ್ ಒಪ್ಪಿಸಿದರು. ಅಂತಿಮ ಹಂತದಲ್ಲಿ ಜಸ್​ಪ್ರೀತ್ ಬುಮ್ರಾ 14 ಎಸೆತಗಳಲ್ಲಿ 16 ರನ್​ಗಳ ಕೊಡುಗೆ ನೀಡಿದರು. ಆದರೆ 49ನೇ ಓವರ್​ನ 5ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ನಸೀಮ್​ಗೆ ವಿಕೆಟ್ ಒಪ್ಪಿಸಿದರು. ಇದರೊಂದಿಗೆ 48.5 ಓವರ್​ಗಳಲ್ಲಿ ಟೀಮ್ ಇಂಡಿಯಾ 266 ರನ್​ಗಳಿಗೆ ಆಲೌಟ್ ಆಯಿತು.

267 ರನ್​ಗಳ ಸುಲಭ ಗುರಿ ಪಡೆದ ಪಾಕಿಸ್ತಾನ ತಂಡದ ಇನಿಂಗ್ಸ್​ಗೆ ಮಳೆ ಅಡ್ಡಿಪಡಿಸಿತು. ನಿರಂತರವಾಗಿ ಸುರಿದ ಮಳೆಯಿಂದಾಗಿ ಮೈದಾನದಲ್ಲಿ ಸಂಪೂರ್ಣ ನೀರು ತುಂಬಿತ್ತು. ಕಟ್ ಆಫ್ ಟೈಮ್​ಗೂ ಮುನ್ನ ಮೈದಾನವನ್ನು ಪರಿಶೀಲಿಸಿದ ಅಂಪೈರ್​ಗಳು ಪಂದ್ಯವನ್ನು ರದ್ದುಗೊಳಿಸುವ ಅಂತಿಮ ನಿರ್ಧಾರ ತೆಗೆದುಕೊಂಡರು. ಅಲ್ಲದೆ ಉಭಯ ತಂಡಗಳು ಒಂದೊಂದು ಅಂಕಗಳನ್ನು ಹಂಚಿಕೊಂಡಿದೆ.

ಟೀಮ್ ಇಂಡಿಯಾ ವಿರುದ್ಧ ಪಂದ್ಯ ರದ್ದಾಗುವುದರೊಂದಿಗೆ ಪಾಕಿಸ್ತಾನ ತಂಡವು ಒಂದು ಅಂಕ ಪಡೆದುಕೊಂಡಿದೆ. ಇದಕ್ಕೂ ಮುನ್ನ ನೇಪಾಳ ವಿರುದ್ಧ ಭರ್ಜರಿ ಜಯ ಸಾಧಿಸಿ 2 ಅಂಕಗಳನ್ನು ಪಡೆದುಕೊಂಡಿತ್ತು. ಇದೀಗ ಒಟ್ಟು 3 ಅಂಕಗಳನ್ನು ಪಡೆದಿರುವ ಪಾಕಿಸ್ತಾನ ತಂಡವು ಗ್ರೂಪ್ ಎ ನಿಂದ ಸೂಪರ್​ 4 ಹಂತಕ್ಕೇರಿದೆ.

ಇತ್ತೀಚಿನ ಸುದ್ದಿ

Exit mobile version