ಮಂಗಳೂರಿಗೆ ಶೀಘ್ರದಲ್ಲೇ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ: ಕೆಎಸ್ ಸಿಎ–ಮೂಡಾ ಮಹತ್ವದ ಹೆಜ್ಜೆ!
ಮಂಗಳೂರು: ಕರಾವಳಿ ಕರ್ನಾಟಕದ ಕ್ರೀಡಾಪ್ರೇಮಿಗಳು ಹಾಗೂ ಯುವ ಕ್ರಿಕೆಟಿಗರ ದಶಕಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ರಾಜ್ಯದ ಮುಂಚೂಣಿ ವಾಣಿಜ್ಯ ಹಾಗೂ ಶೈಕ್ಷಣಿಕ ನಗರವಾಗಿ ಬೆಳೆದಿರುವ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸುವ ನಿಟ್ಟಿನಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA) ನಡುವೆ ಮಹತ್ವದ ಮಾತುಕತೆ ನಡೆಸಿವೆ.
ವರದಿಗಳ ಪ್ರಕಾರ, ಮೂಡಾ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಅವರು ಬೆಂಗಳೂರಿನಲ್ಲಿ ಕೆಎಸ್ ಸಿಎ ನೂತನ ಅಧ್ಯಕ್ಷ, ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರೊಂದಿಗೆ ಸಭೆ ನಡೆಸಿ ಈ ಕ್ರೀಡಾಂಗಣ ನಿರ್ಮಾಣದ ಪ್ರಸ್ತಾವನೆ ಕುರಿತು ಚರ್ಚೆ ನಡೆಸಿದ್ದು, ಯೋಜನೆ ಅಂತಿಮ ಹಂತದ ಚರ್ಚೆಗೆ ತಲುಪಿದೆ.
ಮಂಗಳೂರಿನಲ್ಲಿ ಅತ್ಯಾಧುನಿಕ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ಕನಿಷ್ಠ 40 ರಿಂದ 50 ಎಕರೆ ಜಮೀನಿನ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಮೂಡಾ ವಶದಲ್ಲಿರುವ 75 ಎಕರೆ ಜಮೀನಿನ ಪೈಕಿ 40 ರಿಂದ 50 ಎಕರೆಯನ್ನು ಸ್ಟೇಡಿಯಂಗೆ ಮೀಸಲಿಡಲು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಇದರೊಂದಿಗೆ ಚೇಳ್ಯಾರು ಹಾಗೂ ಎನ್ ಎಂಪಿಎ ವ್ಯಾಪ್ತಿಯಲ್ಲಿ ಸೂಕ್ತ ಸ್ಥಳಗಳನ್ನು ಗುರುತಿಸಲಾಗಿದೆ. ಕೆಎಸ್ ಸಿಎ ನಿಯಮಾವಳಿಯಂತೆ ಈ ಜಮೀನನ್ನು ನೇರವಾಗಿ ಖರೀದಿಸಲು ಅಥವಾ ದೀರ್ಘಾವಧಿಯ ಲೀಸ್ ಆಧಾರದಲ್ಲಿ ಪಡೆಯಲು ಸಿದ್ಧವಿದೆ. ಸ್ಟೇಡಿಯಂ ನಿರ್ಮಾಣ, ಪಿಚ್ ಅಭಿವೃದ್ಧಿ ಹಾಗೂ ಗ್ಯಾಲರಿಗಳ ನಿರ್ಮಾಣದ ಸಂಪೂರ್ಣ ಕೋಟ್ಯಂತರ ರೂಪಾಯಿ ವೆಚ್ಚವನ್ನು ಕೆಎಸ್ ಸಿಎ ಸಂಸ್ಥೆಯೇ ಭರಿಸಲಿದ್ದು, ಇದರಿಂದ ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆ ಬೀಳುವುದಿಲ್ಲ.
ಮಂಗಳೂರಿನಲ್ಲಿ ಈ ಸ್ಟೇಡಿಯಂ ನಿರ್ಮಾಣವಾದರೆ ಕರಾವಳಿ ಭಾಗಕ್ಕೆ ಅನೇಕ ಪ್ರಯೋಜನಗಳು ಸಿಗಲಿವೆ. ಇಲ್ಲಿ ಐಪಿಎಲ್ ಅಥವಾ ಅಂತಾರಾಷ್ಟ್ರೀಯ ಪಂದ್ಯಗಳು ನಡೆದರೆ ದೇಶ–ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಆಗಮಿಸುವುದರಿಂದ ಹೋಟೆಲ್, ರೆಸಾರ್ಟ್, ಸಾರಿಗೆ ಮತ್ತು ರೆಸ್ಟೋರೆಂಟ್ ಕ್ಷೇತ್ರಗಳಿಗೆ ಭಾರಿ ಉತ್ತೇಜನ ಸಿಗಲಿದೆ. ಅಲ್ಲದೆ, ಸ್ಥಳೀಯ ಯುವಕರಿಗೆ ಕ್ರೀಡಾ ತರಬೇತಿ ಅಕಾಡೆಮಿಗಳು, ಈವೆಂಟ್ ಮ್ಯಾನೇಜ್ ಮೆಂಟ್, ಆತಿಥ್ಯ ಹಾಗೂ ಭದ್ರತಾ ವಿಭಾಗಗಳಲ್ಲಿ ನೂರಾರು ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಕರಾವಳಿ ಭಾಗದಿಂದ ಈಗಾಗಲೇ ಕೆ.ಎಲ್. ರಾಹುಲ್ ಅವರಂತಹ ವಿಶ್ವದರ್ಜೆಯ ಆಟಗಾರರು ಮೂಡಿಬಂದಿದ್ದು, ಸ್ಥಳೀಯವಾಗಿ ಸುಸಜ್ಜಿತ ಸ್ಟೇಡಿಯಂ ಇಲ್ಲದೆ ಬೇರೆ ನಗರಗಳತ್ತ ಮುಖ ಮಾಡುವ ಅನಿವಾರ್ಯತೆ ಇದರಿಂದ ತಪ್ಪಲಿದೆ.
ಕೆಎಸ್ ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು ಶೀಘ್ರದಲ್ಲೇ ಮಂಗಳೂರಿಗೆ ಭೇಟಿ ನೀಡಿ ಗುರುತಿಸಲಾದ ಸ್ಥಳಗಳನ್ನು ಪರಿಶೀಲನೆ ನಡೆಸಲಿದ್ದಾರೆ. ಬಳಿಕ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಹಾಗೂ ಸ್ಥಳೀಯ ಶಾಸಕರೊಂದಿಗೆ ಸಮಾಲೋಚನೆ ನಡೆಸಿ ಜಾಗವನ್ನು ಅಂತಿಮಗೊಳಿಸಿ, ಯೋಜನೆಗೆ ಗಟ್ಟಿ ಬುನಾದಿ ಹಾಕಲಾಗುವುದು ಎಂದು ಮೂಡಾ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಹೊರತುಪಡಿಸಿದರೆ ರಾಜ್ಯದಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಮೈದಾನಗಳ ಕೊರತೆಯಿದ್ದು, ಮಂಗಳೂರಿನಲ್ಲಿ ಈ ಯೋಜನೆ ಸಾಕಾರಗೊಂಡರೆ ಕರಾವಳಿ ಭಾಗವು ಪ್ರಮುಖ ಕ್ರಿಕೆಟ್ ಹಬ್ ಆಗಿ ರೂಪುಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.

























