ದ.ಕ. ಜಿಲ್ಲೆಯ ಕಟ್ಟಡ ಕಾರ್ಮಿಕರ ನೆರವಿಗೆ ಧಾವಿಸುವಂತೆ ಸಚಿವ ಸಂತೋಷ್ ಲಾಡ್ ಅವರಿಗೆ ಜಾನಿ ಕೆ.ಪಿ ಮನವಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಕಲ್ಲು ಅಲಭ್ಯತೆಯ ಕಾರಣ ಕೆಲಸ ಕಳಕೊಂಡಿರುವ ಕಟ್ಟಡ ಕಾರ್ಮಿಕರ ನೆರವಿಗೆ ಧಾವಿಸಬೇಕೆಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಕರ್ನಾಟಕ ಸರಕಾರದ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸದಸ್ಯರಾದ ಜಾನಿ ಕೆ.ಪಿ ಮನವಿ ಮಾಡಿದ್ದಾರೆ.
ಇತ್ತೀಚಿಗೆ ಜಿಲ್ಲೆಯಲ್ಲಿ ನಡೆದ ಸರಣಿ ಕೊಲೆಗಳ ನಂತರ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ಕಾನೂನಾತ್ಮಕ ವ್ಯವಹಾರಗಳಿಗೆ ಮಾತ್ರ ಅವಕಾಶ ಹಾಗೂ ಕೆಂಪು ಕಲ್ಲುಗಣಿಗಾರಿಕೆ ಮಾಡುವ ಜಮೀನಿಗೆ ಸಂಬಂಧಿಸಿದ ನಿಯಮಗಳ ಬಗ್ಗೆ ಗೊಂದಲ ಏರ್ಪಟ್ಟ ಕಾರಣದಿಂದಾಗಿ ಕೆಂಪು ಕಲ್ಲು ಗಣಿಗಾರಿಕೆಗೆ ಹಾಗೂ ಸಾಗಾಟಕ್ಕೆ ಸಮಸ್ಯೆ ಎದುರಾಗಿರುತ್ತದೆ. ಈ ಕಾರಣದಿಂದ ಕಟ್ಟಡ ಕೆಲಸಗಾರರು ಕೆಲಸವಿಲ್ಲದೆ ಸಂಕಷ್ಟಕ್ಕೀಡಾಗಿರುತ್ತಾರೆ ಎಂದು ಅವರು ಸಚಿವರಿಗೆ ಮನವರಿಕೆ ಮಾಡಿದರು.
ಈಗಾಗಲೇ ಅತಿಯಾದ ಮಳೆಯ ಕಾರಣಕ್ಕೆ ಕೆಲಸ ಮಾಡಲು ಕಷ್ಟಪಡುತ್ತಿರುವ ಕಟ್ಟಡ ಕಾರ್ಮಿಕರಿಗೆ ಇದೀಗ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗಿದ್ದು, ಕೂಡಲೇ ಕೆಂಪು ಕಲ್ಲು ಗಣಿಗಾರಿಕೆಯನ್ನು ಆಶ್ರಯಿಸಿ ಬದುಕು ನಡೆಸುತ್ತಿರುವ ಸಂತ್ರಸ್ತ ಕಾರ್ಮಿಕರ ನೆರವಿಗೆ ತುರ್ತಾಗಿ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಗುರುವಾರ ಬೆಂಗಳೂರಿನ ವಿಕಾಸಸೌಧದಲ್ಲಿ ಕಾರ್ಮಿಕ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ಮನವಿಗೆ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಪೂರಕವಾಗಿ ಸ್ಪಂದಿಸಿದ್ದು ಕೂಡಲೇ ಸಂಬಂಧಪಟ್ಟ ಸಚಿವರುಗಳಲ್ಲಿ ಮತ್ತು ಅಧಿಕಾರಿಗಳಲ್ಲಿ ಮಾತನಾಡುತ್ತೇನೆ ಎಂದು ಭರವಸೆ ನೀಡಿರುತ್ತಾರೆಂದು ತಿಳಿದು ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD