12:04 PM Saturday 1 - November 2025

ಕಡಬ: ಪ್ರೀತಿಸಲು ನಿರಾಕರಿಸಿದ್ದಕ್ಕೆ ಆ್ಯಸಿಡ್ ದಾಳಿ ನಡೆಸಿದ ಪಾಪಿ!

kadaba news
04/03/2024

ಕಡಬ: ಕಡಬ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮೂವರು ಪಿಯುಸಿ ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ನಡೆಸಿರುವ ಘಟನೆ ಮೇಲ್ನೋಟಕ್ಕೆ ಪ್ರೀತಿ ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ನಡೆದ ಕೃತ್ಯ ಎಂದು ಹೇಳಲಾಗಿದೆ.

ಆ್ಯಸಿಡ್ ದಾಳಿಗೊಳಗಾದ ವಿದ್ಯಾರ್ಥಿನಿಯರ ಪೈಕಿ ಓರ್ವಳು ವಿದ್ಯಾರ್ಥಿನಿ, ಆರೋಪಿ ಅಬೀನ್ ಗೆ ದೂರದ ಸಂಬಂಧಿಯಾಗಿದ್ದು, ಎರಡು ವರ್ಷಗಳಿಂದ ಆಕೆಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ.  ಪ್ರೀತಿಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಆ್ಯಸಿಡ್ ದಾಳಿ ನಡೆಸಿದ್ದಾನೆ ಎಂದು ಪ್ರಾಥಮಿಕ ಮಾಹಿತಿ ತಿಳಿದು ಬಂದಿದೆ.

ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿದ್ದ ಕಾರಣ ಬೇರೆ ಬೇರೆ ಕಾಲೇಜಿನಿಂದ ವಿದ್ಯಾರ್ಥಿಗಳು ಬಂದಿದ್ದರು. ಆರೋಪಿ ಕೂಡ ಯಾವುದೋ ಕಾಲೇಜಿನ ಸಮವಸ್ತ್ರ ಧರಿಸಿ  ಕಾಲೇಜಿನೊಳಗೆ ಬಂದಿದ್ದು, ಕೇರಳ ಮೂಲದ ವಿದ್ಯಾರ್ಥಿನಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾನೆ. ಈ  ವೇಳೆ ಆಕೆಯ ಪಕ್ಕದಲ್ಲೇ ಇದ್ದ ಇನ್ನಿಬ್ಬರು ವಿದ್ಯಾರ್ಥಿನಿಯರ ಮೇಲೆಯೂ ಆ್ಯಸಿಡ್ ಬಿದ್ದಿದ್ದು, ಅವರೂ ಗಾಯಗೊಂಡಿದ್ದಾರೆ.

ಆರೋಪಿ ಅಬೀನ್  ಕೇರಳ ಮೂಲದ ಮಲಪ್ಪುರಂ ಜಿಲ್ಲೆಯ ನೆಲಂಬೂರು ತಾಲೂಕಿನವನಾಗಿದ್ದಾನೆ. ದಾಳಿಗೊಳಗಾದ ಬಾಲಕಿಯ ತಾಯಿ ಮನೆಯ ಬಳಿಯಲ್ಲೇ ಈತನ ಮನೆ ಇದೆ, ಹೀಗಾಗಿ ಅಲ್ಲಿ ಹೋದಾಗ ಈಕೆಯ ಪರಿಚಯವಾಗಿತ್ತು ಎನ್ನಲಾಗಿದೆ.  ಪ್ರೀತಿಸಲು ಬಾಲಕಿ ನಿರಾಕರಿಸಿದ್ದರಿಂದ ಕೋಪಗೊಂಡು ದುಷ್ಕರ್ಮಿ ಈ ಕೃತ್ಯ ಎಸಗಿದ್ದಾನೆ. ಈ ಬಗ್ಗೆ ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

Exit mobile version