ಅಪಘಾತಕ್ಕೊಳಗಾದ ಸವಾರನಿಗೆ ನೆರವಾದ ಕೇರಳ ಸಿಎಂ: ತಮ್ಮದೇ ಪೈಲಟ್ ವಾಹನದಲ್ಲಿ ಆಸ್ಪತ್ರೆಗೆ ರವಾನೆ
ಕೊಚ್ಚಿ: ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಯುವಕನಿಗೆ ಕೇರಳ ಸಿಎಂ ವಿ. ಡಿ. ಸತೀಶನ್ ಸಮಯಪ್ರಜ್ಞೆ ಮೆರೆದು ನೆರವಾಗಿದ್ದಾರೆ. ಗಾಯಾಳುವನ್ನು ತಮ್ಮದೇ ಕಾನ್ವಾಯ್ನ ಪೈಲಟ್ ವಾಹನದಲ್ಲಿ ತಕ್ಷಣವೇ ಆಸ್ಪತ್ರೆಗೆ ತಲುಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಎರ್ನಾಕುಲಂ ಮೂಲದ ಮುಲವುಕಾಡ್ ನಿವಾಸಿ ಅಲನ್ ಲಿವೇರಾ (32) ಗಾಯಗೊಂಡ ಯುವಕನಾಗಿದ್ದು, ಕೊಚ್ಚಿಯ ಕಂಟೇನರ್ ರಸ್ತೆಯಲ್ಲಿ ಅಪಘಾತ ಸಂಭವಿಸಿತ್ತು.
ಭಾನುವಾರ ಸಂಜೆ ಅಲನ್ ಅವರು ಬೈಕ್ ನಲ್ಲಿ ತೆರಳುತ್ತಿದ್ದಾಗ, ಎದುರಿನಿಂದ ಬಂದ ಮತ್ತೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ತಕ್ಷಣವೇ ಬ್ರೇಕ್ ಹಾಕಿದ್ದಾರೆ. ಈ ವೇಳೆ ಬೈಕ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಇದೇ ವೇಳೆ ಉತ್ತರ ಪರವೂರು ಭಾಗದಿಂದ ನಗರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದಕ್ಕೆ ವಿ. ಡಿ. ಸತೀಶನ್ ಅವರು ಪ್ರಯಾಣಿಸುತ್ತಿದ್ದರು. ಕಂಟೇನರ್ ರಸ್ತೆಯಲ್ಲಿ ಯುವಕನೊಬ್ಬ ಗಾಯಗೊಂಡು ರಸ್ತೆಯಲ್ಲಿ ಬಿದ್ದಿರುವುದನ್ನು ಗಮನಿಸಿದ ಅವರು, ತಕ್ಷಣವೇ ತಮ್ಮ ವಾಹನಗಳ ಸಾಲನ್ನು (ಕಾನ್ವಾಯ್) ನಿಲ್ಲಿಸಲು ಸೂಚಿಸಿದರು.
ಆಂಬ್ಯುಲೆನ್ಸ್ ಗೆ ಕಾಯದೆ ಸಮಯ ವ್ಯರ್ಥ ಮಾಡುವುದು ಬೇಡವೆಂದು, ತಮ್ಮ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರಿಗೆ ಸೂಚಿಸಿ ಗಾಯಾಳುವನ್ನು ತಮ್ಮದೇ ಪೈಲಟ್ ವಾಹನದಲ್ಲಿ ಆಸ್ಪತ್ರೆಗೆ ರವಾನಿಸಿದರು.
ಮರಡು ಪೊಲೀಸ್ ಠಾಣೆಯ ಸಿಬ್ಬಂದಿ ಯುವಕನನ್ನು ತಕ್ಷಣವೇ ಕೊಚ್ಚಿಯ ಆಸ್ಟರ್ ಮೆಡ್ ಸಿಟಿ (Aster Medcity) ಆಸ್ಪತ್ರೆಗೆ ದಾಖಲಿಸಿದರು. ಸದ್ಯ ಯುವಕ ಅಪಾಯದ ಹಂತದಿಂದ ಹೊರಬಂದಿದ್ದು, ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ವಿ. ಡಿ. ಸತೀಶನ್ ಅವರ ಈ ತಕ್ಷಣದ ನಿರ್ಧಾರ ಹಾಗೂ ಮಾನವೀಯ ನಡೆಯನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.

























