8:36 AM Wednesday 5 - November 2025

ಫ್ಲೈಟ್ ನಲ್ಲೇ ಬರ್ತಿದ್ರು.. ಸ್ಕಾರ್ಫಿಯೋ ಕಾರ್ ನಲ್ಲಿ ತಿರುಗಾಡ್ತಿದ್ರು ಈ ಖತರ್ನಾಕ್ ಲೇಡಿ ಗ್ಯಾಂಗ್‍!

Lady gang
27/08/2023

ಬೆಂಗಳೂರು: ಬೆಂಗಳೂರಿನ‌ ಅಶೋಕ್ ನಗರ ಪೊಲೀಸರು ಖತರ್ನಾಕ್ ಲೇಡಿ ಗ್ಯಾಂಗ್‍ ನ್ನು ಪೊಲೀಸರು  ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಗುಂಟೂರು ಮೂಲದ ರಮಣ, ರತ್ನಾಲು, ಚುಕ್ಕಮ್ಮ ಎಂದು ಗುರುತಿಸಲಾಗಿದೆ. ಇವರು  ಆಂಧ್ರ ಪ್ರದೇಶದಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದು ಸೀರೆ ಕಳ್ಳತನ ಮಾಡಿ ಮರಳುತ್ತಿದ್ದರು.  ಆರೋಪಿಗಳು ಗುಂಟೂರಿನಿಂದ ವಿಮಾನದಲ್ಲಿ ಬೆಂಗಳೂರಿಗೆ  ಬರುತ್ತಿದ್ದರು. ಬಳಿಕ ಸ್ಕಾರ್ಪಿಯೋ ಕಾರಿನಲ್ಲಿ ಬೆಂಗಳೂರನ್ನು ಸುತ್ತುತ್ತಿದ್ದರು. ನಂತರ ಸೀರೆ ಕೊಂಡುಕೊಳ್ಳುವ ನೆಪದಲ್ಲಿ ಬಟ್ಟೆ ಅಂಗಡಿಗಳಿಗೆ ತೆರಳುತ್ತಿದ್ದರು.

ಕಳ್ಳಿಯರು ಶ್ರೀಮಂತರಂತೆ ಬಿಂಬಿಸಲು ಮೈತುಂಬಾ ಒಡವೆ ಹಾಕಿಕೊಂಡು ಅಂಗಡಿಗೆ ತೆರಳುತ್ತಿದ್ದರು. ಅಲ್ಲಿ ಲಕ್ಷಗಟ್ಟಲೆ ಬೆಲೆ ಬಾಳುವ ಸೀರೆ ತೋರಿಸುವಂತೆ ಕೇಳುತ್ತಿದ್ದರು. ಬಳಿಕ ಹತ್ತಾರು ಸೀರೆ ನೋಡಿ ಬೇರೆ ಸೀರೆ ತೋರಿಸಿ ಎಂದು ಹೇಳಿ, ಅಂಗಡಿಯವರು ಒಳಗಿಂದ ತರಲು ತೆರಳಿದಾಗ ಬಂಡಲ್‍ ನ್ನೇ ಉಟ್ಟ ಸೀರೆಯಲ್ಲಿ ಮುಚ್ಚಿಟ್ಟುಕೊಂಡು ಪರಾರಿಯಾಗುತ್ತಿದರು ಎಂದು ತಿಳಿದು ಬಂದಿದೆ.

ಹೀಗೆ ಪರಾರಿಯಾಗುವಾಗ ಸೆಕ್ಯೂರಿಟಿ ಒಬ್ಬರಿಗೆ ಮಹಿಳೆಯ ಕಾಲಿನ ಬಳಿ ಸೀರೆ ಇರುವುದು ಕಾಣಿಸಿತ್ತು. ಬಳಿಕ ಅನುಮಾನಗೊಂಡು ಅವರು ಮಾಲೀಕರಿಗೆ ತಿಳಿಸಿದ್ದರು. ಈ ವೇಳೆ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಕಳ್ಳತನ ಬೆಳಕಿಗೆ ಬಂದಿದೆ. ಬಳಿಕ ಮಾಲೀಕರು ಸಿಸಿಟಿವಿ ವೀಡಿಯೋ ಸಮೇತ ತೆರಳಿ ಅಶೋಕ ನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.

ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದಾಗ ಬೆಂಗಳೂರಿನ ಹಲವೆಡೆ ಕಳ್ಳತನ ಎಸಗಿರುವುದು ಬೆಳಕಿಗೆ ಬಂದಿದೆ. ಸುಮಾರು 14 ಲಕ್ಷ ಮೌಲ್ಯದ ಸೀರೆ ಕಳ್ಳತನ ಮಾಡಿರುವುದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ

Exit mobile version