10:02 PM Wednesday 28 - January 2026

ಕುತ್ಲೂರು ಕಾಡಬಾಗಿಲು ಸೇತುವೆ ಕುಸಿತ: ಸಂಕಷ್ಟದಲ್ಲಿ ಅರಣ್ಯವಾಸಿಗಳು

kuthluru
26/07/2023

ಕುತ್ಲೂರು: ಸುಮಾರು 30  ಮಲೆಕುಡಿಯ ಮತ್ತು ಇತರ ಅರಣ್ಯವಾಸಿ ಕುಟುಂಬಗಳ ಸಂಪರ್ಕ ಸೇತುವೆಯೊಂದು ಕುಸಿದ ಪರಿಣಾಮ ಅರಣ್ಯವಾಸಿಗಳು ಸಂಕಷ್ಟಕ್ಕೀಡಾಗಿದ್ದಾರೆ.

ಕುಕ್ಕುಜೆಯಿಂದ ಅಳಂಬ, ಬರೆಂಗಾಡಿ, ಒಂಜರ್ದಡಿ, ಏರ್ದಡಿ,  ಪಂಜಾಲು ಮೊದಲಾದ ಕಡೆಗೆ ಸಂಪರ್ಕಿಸುವ ಕಾಡಬಾಗಿಲು ಎಂಬಲ್ಲಿಯ ಸೇತುವೆ ಜುಲೈ 26 ರಂದು ಕುಸಿದಿದೆ. ಈ ಸೇತುವೆ ಸುಮಾರು 30  ಅರಣ್ಯವಾಸಿ ಮಲೆಕುಡಿಯ ಮತ್ತು ಇತರ ಅರಣ್ಯವಾಸಿ ಕುಟುಂಬಗಳಿಗೆ ಸಂಪರ್ಕಿಸುವ ಸೇತುವೆಯಾಗಿದೆ.

ಸುಮಾರು 50 ವರ್ಷದ ಹಿಂದೆ ಈ ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು. ಇದೀಗ ಸೇತುವೆಯ ಮಧ್ಯದ ಪಿಲ್ಲರ್ ಕುಸಿದಿದೆ. ಅರಣ್ಯವಾಸಿಗಳು ಈ ಸೇತುವೆ ಮೂಲಕವೇ ಸಂಚಾರ ಮಾಡುತ್ತಿದ್ದರು. ಇದೀಗ ಸೇತುವೆ ಕುಸಿದಿರುವುದರಿಂದ ತೊಂದರೆಯಾಗಿದೆ. ಇನ್ನು ಕಿಲೋಮೀಟರ್ ಗಟ್ಟಲೆ ಕಾಲ್ನಡಿಗೆಯಲ್ಲೇ ಸಾಗಬೇಕಾದ ಅನಿವಾರ್ಯ ನಿರ್ಮಾಣವಾಗಿದೆ.

ಅರಣ್ಯವಾಸಿಗಳಿಗೆ ಸಂಚಾರಿ ವಾಹನದ ಮೂಲಕ ಅಳಂಬ ಪ್ರದೇಶಕ್ಕೆ ಪಡಿತರ ವಿತರಣೆಯಾಗುತ್ತಿತ್ತು. ಈ ಸೇತುವೆ ಕುಸಿತವಾಗಿರುವುದರಿಂದ ಇನ್ನು ಪಡಿತರ ಸೇರಿದಂತೆ ಇನ್ನಿತರ ವಸ್ತುಗಳನ್ನೂ ಕಾಲ್ನಡಿಗೆಯಲ್ಲೇ ಹೊತ್ತೊಯ್ಯುವ ಅನಿವಾರ್ಯತೆ ಸೃಷ್ಟಿಯಾಗಿದೆ. ಆರೋಗ್ಯ ಅಥವಾ ಇನ್ನಿತರ ತುರ್ತು ಸಂದರ್ಭಗಳಲ್ಲೂ ಇಲ್ಲಿನ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ.

ಮೂರು ವರ್ಷದ ಹಿಂದೆ ಕುಕ್ಕುಜೆ ಸಮೀಪದ ಸೇತುವೆ ಇದೇ ರೀತಿ ಕುಸಿತವಾಗಿತ್ತು. ನಂತರ ಹೊಸ ಸೇತುವೆ ನಿರ್ಮಾಣ ಮಾಡಲಾಗಿತ್ತು. ಅದೇ ಸಂದರ್ಭದಲ್ಲಿ ಕಾಡಬಾಗಿಲು ಸೇತುವೆಯನ್ನೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಆದರೂ ಹೊಸ ಸೇತುವೆ ನಿರ್ಮಾಣಕ್ಕೆ ಮುಂದಾಗಿರಲಿಲ್ಲ. ಇದೀಗ ಸೇತುವೆ ಕುಸಿತ ಆಗಿರುವುದರಿಂದ ಸಂಪರ್ಕವೇ ಸಾಧ್ಯವಿಲ್ಲದಂತಾಗಿದೆ.

ಕಾಡಬಾಗಿಲು ಸೇತುವೆಯನ್ನು ತಕ್ಷಣವೇ ನಿರ್ಮಾಣ ಮಾಡಬೇಕು. ಅರಣ್ಯವಾಸಿಗಳಿಗೆ ಸಂಚರಿಸಲು   ತೊಂದರೆಯಾಗದಂತೆ ಕ್ರಮ ವಹಿಸಲು ಆಡಳಿತ ವ್ಯವಸ್ಥೆ ಮುಂದಾಗಬೇಕು ಎಂದು ಸ್ಥಳೀಯ ನಿವಾಸಿ ಚೀಂಕ್ರ ಮಲೆಕುಡಿಯ ಬರೆಂಗಾಡಿ ಒತ್ತಾಯಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿhttps://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿhttps://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿhttps://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version