12:40 PM Tuesday 8 - September 2026

‘ಲಿಟಲ್ ಫ್ಯಾಟ್ ಬ್ಲ್ಯಾಕ್ ಶರ್ಟ್’: ಗ್ರಾಹಕನಿಗೆ ‘ಬಾಡಿ ಶೇಮಿಂಗ್’ ಮಾಡಿದ ಬೆಂಗಳೂರಿನ ಕೆಫೆ

cafe subko
23/08/2026

ಬೆಂಗಳೂರು:  ರಾಜಧಾನಿ ಬೆಂಗಳೂರಿನ ಪ್ರಸಿದ್ಧ ಕೆಫೆಯೊಂದರಲ್ಲಿ ಗ್ರಾಹಕರೊಬ್ಬರಿಗೆ ‘ಬಾಡಿ ಶೇಮಿಂಗ್’ (ದೇಹದ ಆಕಾರವನ್ನು ಹೀಯಾಳಿಸುವುದು) ಮಾಡಿದ ಘಟನೆ ಬೆಳಕಿಗೆ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ನಗರದ ಜನಪ್ರಿಯ ‘ಸಬ್ಕೋ ಕೆಫೆ’ಗೆ (Subko Cafe) ಭೇಟಿ ನೀಡಿದ್ದ ಗ್ರಾಹಕರೊಬ್ಬರು ಆರ್ಡರ್ ಮಾಡಿ ಪಡೆದ ಬಿಲ್ (ರಸೀದಿ) ನೋಡಿ ಆಘಾತಗೊಂಡಿದ್ದಾರೆ. ರಸೀದಿಯಲ್ಲಿ ಗ್ರಾಹಕರ ಹೆಸರು, ಟೇಬಲ್ ಸಂಖ್ಯೆ ಅಥವಾ ಆರ್ಡರ್ ವಿವರ ನಮೂದಿಸುವ ಬದಲು, ಅವರ ಶಾರೀರಿಕ ರಚನೆ ಮತ್ತು ಉಡುಪನ್ನು ಆಧರಿಸಿ “ಲಿಟಲ್ ಫ್ಯಾಟ್ ಬ್ಲ್ಯಾಕ್ ಶರ್ಟ್” (Little Fat Black Shirt) ಎಂದು ಬರೆಯಲಾಗಿತ್ತು.

ಈ ರಸೀದಿಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಗ್ರಾಹಕರು, “ನನ್ನ ಹೆಸರು ಅಥವಾ ಟೇಬಲ್ ಸಂಖ್ಯೆಯನ್ನು ಕೇಳಿ ನಮೂದಿಸುವ ಬದಲು, ನನ್ನ ದೇಹದ ಆಕಾರ ಮತ್ತು ಬಟ್ಟೆಯ ಆಧಾರದ ಮೇಲೆ ಈ ರೀತಿ ವಿವರಣೆ ನೀಡಿರುವುದು ಎಷ್ಟು ಸರಿ?” ಎಂದು ಕೆಫೆ ಆಡಳಿತ ಮಂಡಳಿಯನ್ನು ಪ್ರಶ್ನಿಸಿದ್ದರು. ಈ ಪೋಸ್ಟ್ ಕ್ಷಣಾರ್ಧದಲ್ಲಿ ವೈರಲ್ ಆಗಿ, ನೆಟ್ಟಿಗರಿಂದ ಕೆಫೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಯಿತು.

ಹೆಸರಿನ ಬದಲಾಗಿ ಗ್ರಾಹಕರನ್ನು ‘ಲಿಟಲ್ ಫ್ಯಾಟ್ ಬ್ಲ್ಯಾಕ್ ಶರ್ಟ್’ ಎಂದು ಕೆಫೆ ಸಿಬ್ಬಂದಿ ನಮೂದಿಸಿದ್ದರು. ಗ್ರಾಹಕರು ಬಿಲ್ ಫೋಟೋ ಶೇರ್ ಮಾಡುತ್ತಿದ್ದಂತೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ, ಸಾರ್ವಜನಿಕವಾಗಿ ತಪ್ಪು ಒಪ್ಪಿಕೊಂಡು ‘ಸಬ್ಕೋ ಕೆಫೆ’ ಆಡಳಿತ ಮಂಡಳಿ ಕ್ಷಮೆ ಕೇಳಿದೆ.


“ಕೆಲವು ತಪ್ಪುಗಳನ್ನು ಸೌಮ್ಯವಾಗಿ ಸರಿಪಡಿಸಬಹುದು. ಆದರೆ ಕೆಲವು ಘಟನೆಗಳ ಬಗ್ಗೆ ಗಟ್ಟಿಯಾಗಿ ಮಾತನಾಡಬೇಕಾಗುತ್ತದೆ, ಏಕೆಂದರೆ ಮೌನವಾಗಿದ್ದರೆ ಇಂತಹ ಸಂಸ್ಕೃತಿ ಬೆಳೆಯುತ್ತದೆ. ಈ ಕೆಟ್ಟ ಅನುಭವ ಎದುರಿಸಿದ ಗ್ರಾಹಕರಿಗೆ ನಾವು ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತೇವೆ.”

— ಸಬ್ಕೋ ಕೆಫೆ


ಅಲ್ಲದೆ, “ಯಾವುದೇ ರೀತಿಯ ‘ಫ್ಯಾಟ್ ಶೇಮಿಂಗ್’ ಅಥವಾ ದೇಹದ ಆಕಾರ ಹೀಯಾಳಿಸುವುದು ಸಂಪೂರ್ಣವಾಗಿ ತಪ್ಪು. ಇದಕ್ಕೆ ಯಾವುದೇ ವಿನಾಯಿತಿ ಇಲ್ಲ. ನಮ್ಮ ಸಂಸ್ಥೆಯ ಅಡಿಯಲ್ಲಿ ಇಂತಹ ಘಟನೆ ನಡೆದಿರುವುದು ಕ್ರೂರ ಹಾಗೂ ವಿಷಾದನೀಯ. ನಮ್ಮ ಸಿಬ್ಬಂದಿ ಮಾಡಿದ್ದು ಸ್ಪಷ್ಟವಾಗಿ ತಪ್ಪು. ಇದರ ಪೂರ್ಣ ಹೊಣೆಯನ್ನು ನಾವು ಹೊರಡುತ್ತೇವೆ,” ಎಂದು ಕೆಫೆ ಸ್ಪಷ್ಟಪಡಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ‘ಆಂತರಿಕ ದೂರು ಸಮಿತಿ’ (Internal Complaints Commission — ICC) ಮೂಲಕ ಪರಿಶೀಲನೆ ನಡೆಸಲಾಗುತ್ತಿದ್ದು, ಆಂತರಿಕವಾಗಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕೆಫೆ ಭರವಸೆ ನೀಡಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

mobil chat sitesi
Exit mobile version