ಮನೆ ಬಿಟ್ಟು ಓಡಿ ಹೋದ ಪ್ರೇಮಿಗಳು: ಗ್ರಾ.ಪಂ. ಸದಸ್ಯನನ್ನು ಅರೆಬೆತ್ತಲೆಗೊಳಿಸಿ ಹಲ್ಲೆ!

ಹಾವೇರಿ: ಗ್ರಾಮ ಪಂಚಾಯತ್ ಸದಸ್ಯರೊಬ್ಬರನ್ನು ನಡುರಸ್ತೆಯಲ್ಲಿ ಅರೆ ಬೆತ್ತಲೆಗೊಳಿಸಿ ಮೃಗೀಯವಾಗಿ ಥಳಿಸಿದ ಘಟನೆ ಹಲಗೇರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗ್ರಾಮ ಪಂಚಾಯತ್ ಸದಸ್ಯನ ಸಂಬಂಧಿಯೋರ್ವ, ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ಹಲವು ವರ್ಷಗಳ ಕಾಲ ಜೊತೆಯಾಗಿ ತಿರುಗಾಡಿದ್ದ ಆ ಜೋಡಿ, ನಾಲ್ಕೈದು ದಿನಗಳ ಹಿಂದೆ ಮನೆ ಬಿಟ್ಟು ಓಡಿ ಹೋಗಿದ್ದರು. ಇದೇ ಕಾರಣವನ್ನು ಮುಂದಿಟ್ಟುಕೊಂಡು ಗ್ರಾಮ ಪಂಚಾಯತ್ ಸದಸ್ಯನ ಮೇಲೆ ಅನಾಗರಿಕರಂತೆ ಯುವತಿಯ ಮನೆಯವರು ದಾಳಿ ನಡೆಸಿದ್ದಾರೆ.
ಗ್ರಾಮ ಪಂಚಾಯತ್ ಸದಸ್ಯನನ್ನು ರಸ್ತೆಯಲ್ಲೇ ಅರೆಬೆತ್ತಲಾಗಿ ನಿಲ್ಲಿಸಿ ಹಲ್ಲೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಶಿವಾಜಿ ಕಮದೋಡ, ಬಸಣ್ಣ ಸೇರಿದಂತೆ 20 ಜನರ ವಿರುದ್ಧ ಹಲ್ಲೆ ಆರೋಪ ಕೇಳಿ ಬಂದಿದೆ. ಹಲ್ಲೆ ನಡೆಸಿದವರ ವಿರುದ್ಧ ಹಲಗೇರಿ ಠಾಣೆಯಲ್ಲಿ ಗ್ರಾ.ಪಂ. ಸದಸ್ಯ ದೂರು ನೀಡಿದ್ದಾರೆ.
ಬೆಳಗಾವಿಯ ವಂಟಮುರಿಯಲ್ಲಿ ಇತ್ತೀಚೆಗೆ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಘಟನೆಯ ಬೆನ್ನಲ್ಲೇ ಇದೀಗ ಮತ್ತೊಂದು ಅನಾಗರಿಕ ಘಟನೆ ನಡೆದಿದೆ. ಹಿಂದೆ ಉತ್ತರ ಪ್ರದೇಶಗಳಂತಹ ರಾಜ್ಯಗಳಲ್ಲಿ ಕಂಡು ಬರುತ್ತಿದ್ದ ಅಸಮಾನತೆಯ ಅನಾಗರಿಕ ಕೃತ್ಯಗಳು ಕರ್ನಾಟಕಕ್ಕೂ ಕಾಲಿಟ್ಟಿದೆ.