5:38 PM Thursday 23 - October 2025

ಬ್ರ್ಯಾಂಡ್ ಬೆಂಗಳೂರಲ್ಲ, ಬೆಸ್ಟ್ ಬೆಂಗಳೂರು ಮಾಡಿ: BBMP ಚುನಾವಣೆ ಯಾವಾಗ: ಆಪ್ ಪ್ರಶ್ನೆ

app
09/09/2023

ಬೆಂಗಳೂರು: ಕಳೆದ ಎರಡು ವರ್ಷಗಳಿಂದ ನಡೆಯದ ಬಿಬಿಎಂಪಿ ಚುನಾವಣೆ ಹಾಗೂ ಬಿಬಿಎಂಪಿ ವಾರ್ಡ್​ಗಳ ಮರುವಿಂಗಡಣೆ ಬಗ್ಗೆ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಡಾ. ಸತೀಶ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

2020ರಲ್ಲೇ ಬಿಬಿಎಂಪಿ ಅವಧಿ ಪೂರ್ಣಗೊಂಡಿದೆ. 2 ವರ್ಷ ಕಳೆದ್ರೂ ಸರ್ಕಾರ ಬಿಬಿಎಂಪಿ ಚುನಾವಣೆ ನಡೆಸದೆ ನಿರ್ಲಕ್ಷ್ಯ ತೋರುತ್ತಿದೆ. ಆಗಿನ ಬಿಜೆಪಿ ಸರ್ಕಾರ ಗ್ರೇಟರ್ ಬೆಂಗಳೂರು ಮಾಡಬೇಕೆಂಬ ಕಾರಣಕ್ಕೆ ನಾಲ್ಕೈದು ಪಾಲಿಕೆಗಳನ್ನಾಗಿ ವಿಂಗಡಿಸಲು ನಿರ್ಧರಿಸಿತ್ತು. ಇದೇ ವೇಳೆ ಕೊರೊನಾ ಸಹ ಬಂದಿತ್ತು. ಕೊರೊನಾ ಬಳಿಕ ಬಿಬಿಎಂಪಿ ಚುನಾವಣೆ ಆಗಲಿಲ್ಲ. ಬಳಿಕ ಗ್ರೇಟರ್ ಬೆಂಗಳೂರು ನಿರ್ಧಾರವನ್ನು ಸರ್ಕಾರ ಹಿಂತೆಗೆದುಕೊಂಡಿತು ಎಂದರು.

ಕೋರ್ಟ್ ಗಡುವು.. ಸರ್ಕಾರ ತರಾತುರಿ ನಿರ್ಧಾರ

ಬಿಬಿಎಂಪಿ ಮರುವಿಂಗಡಣೆಗೆ ಮುಂದಾಗಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲೇ, ಸಾರ್ವಜನಿಕ ವಲಯ ಹಾಗೂ ವಿವಿಧ ಸಂಘಟನೆಗಳಿಂದ ವಾರ್ಡ್​ಗಳ ವಿಂಗಡಣೆ ಸಮರ್ಪಕವಾಗಿ ಆಗಿಲ್ಲವೆಂದು 3200ಕ್ಕೂ ಹೆಚ್ಚು ಆಕ್ಷೆಪಣೆಗಳು ಬಂದಿದ್ದವು. ಆದರೆ, ನಗರಾಭಿವೃದ್ಧಿ ಇಲಾಖೆ ಈ ಆಕ್ಷೆಪಣೆಗಳನ್ನು ಯಾವುದೇ ರೀತಿ ಪರಿಶೀಲನೆ ಮಾಡದೆ, ಮೂರು ದಿನಗಳಲ್ಲೇ 243 ವಾರ್ಡ್ ಮಾಡಿ ಆದೇಶ ಹೊರಡಿಸುತ್ತಾರೆ. ಬಳಿಕ ಇದು ಕೋರ್ಟ್ ಮೆಟ್ಟಿಲೇರಿ, ಕೋರ್ಟ್ 12 ವಾರಗಳ ಗಡುವು ನೀಡಿತ್ತು. ಸೆಪ್ಟೆಂಬರ್ 18ಕ್ಕೆ ಕೋರ್ಟ್ ನೀಡಿರುವ ಈ ಗಡುವು ಮುಕ್ತಾಯವಾಗಲಿದೆ. ಇದೀಗ ಕಾಂಗ್ರೆಸ್ ಸರ್ಕಾರ ತರಾತುರಿಯಲ್ಲಿ 243 ವಾರ್ಡ್​ಗಳ ಬದಲಿಗೆ 225ಕ್ಕೆ ಮಾಡಿ ಅಧಿಸೂಚನೆ ಹೊರಡಿಸಿದೆ. ಈಗಲೂ ವಾರ್ಡ್ ಮರುವಿಂಗಡಣೆಗೆ 3,300 ಆಕ್ಷೇಪಣೆಗಳು ಬಂದಿವೆ. ಆದರೂ, 3300 ಆಕ್ಷೇಪಣೆಗಳಿಗೆ ಸರ್ಕಾರ ಏನು ಉತ್ತರ ನೀಡಿದೆ ಎಂದು ಪ್ರಶ್ನಿಸಿದ್ದಾರೆ.

ಎಲ್ಲಿಂದ ಎಷ್ಟು ದೂರು?

ಯಶವಂತಪುರ- 1878
ಚೌಡೇಶ್ವರಿ ವಾರ್ಡ್ (ಯಲಹಂಕ)- 525
ಕಲ್ಕೆರೆ (ಕೆ.ಆರ್ ಪುರಂ) – 311
ಶಿವಾಜಿನಗರ- 109

ಬ್ರ್ಯಾಂಡ್ ಬೆಂಗಳೂರಲ್ಲ, ಬೆಸ್ಟ್ ಬೆಂಗಳೂರು ಮಾಡಿ

2 ವರ್ಷಗಳಿಂದ ಬಿಬಿಎಂಪಿ ಚುನಾವಣೆಯಾಗಿಲ್ಲ, ಕಾರ್ಪೋರೇಟರ್ ಗಳೂ ಇಲ್ಲ. ಆದ್ರೂ ಡಿಸಿಎಂ ಡಿ.ಕೆ ಶಿವಕುಮಾರ್ ಬ್ರ್ಯಾಂಡ್ ಬೆಂಗಳೂರು ಮಾಡಲು ಹೊರಟಿದ್ದಾರೆ. 3 ವರ್ಷ ಆದ್ರೂ ಚುನಾವಣೆ ನಿರ್ಧಾರವಾಗಿಲ್ಲ. ವಾರ್ಡ್ ಪಟ್ಟಿಗಳ ಅಂತಿಮಗೊಂಡಿಲ್ಲ. ಮೀಸಲಾತಿಯ ಓಬಿಸಿ ಪಟ್ಟಿ ಅಂತಿಮವಾಗಿಲ್ಲ. ಆಗಲೇ ಬ್ರ್ಯಾಂಡ್ ಬೆಂಗಳೂರು ಸಮಾವೇಶಕ್ಕೆ ತಯಾರಿ ಮಾಡಿಕೊಂಡಿದ್ದಾರೆ. 70 ಸಾವಿರ ಸಲಹೆಗಳನ್ನು ಬೆಂಗಳೂರಿಗರು ಸರ್ಕಾರಕ್ಕೆ ಕೊಟ್ಟಿದ್ದಾರೆ. ಸಲಹೆಗಳನ್ನು ಹೇಗೆ ವರ್ಗೀಕರಿಸಿದ್ದೀರಿ. 10-15 ದಿನಗಳಲ್ಲಿ ಸಲಹೆಗಳನ್ನು ವರ್ಗೀಕರಿಸಲು ಹೇಗೆ ಸಾಧ್ಯ. ಇದು ಕಣ್ಣೊರೆಸುವ ತಂತ್ರ. ಬ್ರ್ಯಾಂಡ್ ಬೆಂಗಳೂರಲ್ಲ, ಮೊದಲು ಬೆಸ್ಟ್ ಬೆಂಗಳೂರು ಮಾಡಿ. ರಸ್ತೆಗುಂಡಿ, ಚರಂಡಿಗಳನ್ನು ಸರಿ ಮಾಡಿಸಿ, ಈಗಿರುವ ಬೆಂಗಳೂರನ್ನು ಬೆಸ್ಟ್ ಮಾಡಿ ಸಾಕು. ಕ್ರಮೇಣ ಈ ಬೆಸ್ಟ್ ಬೆಂಗಳೂರು ತಾನಾಗಿಯೇ ಬ್ರ್ಯಾಂಡ್ ಬೆಂಗಳೂರು ಆಗುತ್ತದೆ. ನಿಮಗೆ ಬ್ರ್ಯಾಂಡ್ ಬೆಂಗಳೂರು ಬಗ್ಗೆ ಅಷ್ಟೊಂದು ಇಚ್ಛಾಶಕ್ತಿ ಇದ್ರೆ, ಬದ್ಧತೆ ಇದ್ರೆ, ಈ ಕೂಡಲೇ ಬಿಬಿಎಂಪಿ ಚುನಾವಣೆಗಿರುವ ಅಡೆತಡೆ, ಸಮಸ್ಯೆ, ನೂನ್ಯತೆಗಳನ್ನ ನಿವಾರಿಸಿ. ಆದಷ್ಟು ಬೇಗ ಚುನಾಯಿತ ಪ್ರತಿನಿಧಿಗಳನ್ನು ನೇಮಿಸಿ ಎಂದು ಕಾಂಗ್ರೆಸ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿಶ್ವನಾಥ್ ಟಿಜಿ ಮತ್ತು ಮಾಧ್ಯಮ ಉಸ್ತುವಾರಿ ಅನಿಲ್ ನಾಚಪ್ಪ ಇದ್ದರು.ಅಲ್ಲದೆ, ಆದಷ್ಟು ಬೇಗ ಬಿಬಿಎಂಪಿ ಚುನಾವಣೆಗೆ ತಯಾರಿ ನಡೆಸದಿದ್ರೆ ವಿನೂತನ ಪ್ರತಿಭಟನೆ ಮಾಡುವುದಾಗಿ ಆಪ್ ಪಕ್ಷ ಎಚ್ಚರಿಸಿದೆ.

ಇತ್ತೀಚಿನ ಸುದ್ದಿ

Exit mobile version