ಮಥುರಾದಲ್ಲಿ ಕುಸಿದ ಹಳೆ ಕಟ್ಟಡ: ಐದು ಮಂದಿ ಸಾವು

ಮಥುರಾದ ಬಂಕೆ ಬಿಹಾರಿ ದೇವಸ್ಥಾನದ ಬಳಿಯ ದುಸೇಟ್ ಪ್ರದೇಶದಲ್ಲಿ ಮೂರು ಅಂತಸ್ತಿನ ಹಳೆಯ ಕಟ್ಟಡದ ಬಾಲ್ಕನಿ ಮತ್ತು ಗೋಡೆ ಕುಸಿದು ಐದು ಮಂದಿ ಸಾವನ್ನಪ್ಪಿದ್ದು ಸುಮಾರು 12 ಕ್ಕಿಂತಲೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ.
ಸ್ಥಳೀಯ ಪೊಲೀಸರು ಮತ್ತು ಆಡಳಿತಾಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ವೃಂದಾವನದ ಸೌಶಾಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಳೆಯಿಂದಾಗಿ ಮೂರು ಅಂತಸ್ತಿನ ಕಟ್ಟಡದ ಬಾಲ್ಕನಿ ಬಿದ್ದಿದೆ ಎಂದು ಹೇಳಲಾಗುತ್ತಿದೆ.
ಪರಿಹಾರ ಮತ್ತು ರಕ್ಷಣಾ ಕಾರ್ಯ ನಡೆಯುತ್ತಿದೆ. ಮೃತರು ಮತ್ತು ಗಾಯಗೊಂಡವರಿಗೆ ನಿಯಮಾನುಸಾರ ಪರಿಹಾರ ನೀಡಲಾಗುವುದು ಎಂದು ಡಿಎಂ ಪುಲ್ಕಿತ್ ಖರೆ ತಿಳಿಸಿದ್ದಾರೆ. ಇದರೊಂದಿಗೆ ಅವಘಡಕ್ಕೆ ಕಾರಣ ತನಿಖೆಯ ನಂತರವಷ್ಟೇ ತಿಳಿಯಲಿದೆ ಎಂದರು.
ದುಸಾಯತ್ ಪ್ರದೇಶದ ಬಳಿ ಹಳೆಯ ಮೂರು ಅಂತಸ್ತಿನ ಮನೆ ಇತ್ತು ಎಂದು ಎಸ್‌ಎಸ್‌ಪಿ ಶೈಲೇಶ್ ಪಾಂಡೆ ತಿಳಿಸಿದ್ದಾರೆ. ಏಕಾಏಕಿ ಮನೆಯ ಮೇಲ್ಭಾಗ ಕುಸಿದಿದ್ದು, ಕೆಲವರು ಅವಶೇಷಗಳಡಿ ಸಿಲುಕಿದ್ದಾರೆ. ಪೊಲೀಸ್ ತಂಡದೊಂದಿಗೆ ಅಗ್ನಿಶಾಮಕ ದಳದ ತಂಡ ಕೂಡ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ನಗರ ಪಾಲಿಕೆ ತಂಡವನ್ನೂ ಸ್ಥಳಕ್ಕೆ ಕರೆಸಲಾಗಿದೆ ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ.