ಸಮಾಜದಲ್ಲಿ ಮಾಧ್ಯಮಗಳ ಮಾತ್ರ ಬಹುಮುಖ್ಯ : ಡಾ. ಬಸವಲಿಂಗ ಪಟ್ಟದ್ದೇವರು

awarad
19/07/2024

ಔರಾದ್ : ಸರಕಾರ ಮತ್ತು ಸಮಾಜದ ಕೊಂಡಿಯಾಗಿ ಪತ್ರಿಕೆಗಳು ಕೆಲಸ ಮಾಡುತ್ತಿವೆ. ಅದೇ ಕಾರಣಕ್ಕೆ ಮಾಧ್ಯಮಗಳ ಪಾತ್ರ ಸಮಾಜದಲ್ಲಿ ಬಹುಮುಖ್ಯವಾಗಿದೆ ಎಂದು ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷರಾದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು.

ಪಟ್ಟಣದ ತಾಲೂಕು ಪಂಚಾಯತ ಸಭಾಂಗಣದಲ್ಲಿ ಶುಕ್ರವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು.

ಜನರಲ್ಲಿ ಆತ್ಮವಿಶ್ವಾಸ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಪತ್ರಿಕೆಗಳು, ಸಮಾಜವನ್ನು ಕಾಡುತ್ತಿರುವ ಭ್ರಷ್ಟಾಚಾರ, ಮೂಢನಂಬಿಕೆಗಳ ವಿರುದ್ಧ ಜನಜಾಗೃತಿ ಉಂಟು ಮಾಡುವಲ್ಲಿ ಪ್ರಮುಖ ಪಾತ್ರವಹಿಸಿವೆ ಎಂದರು.

ಔರಾದ್ ತಾಲೂಕಿನ ಪತ್ರಕರ್ತರು ಗಡಿ ಭಾಗದ ಸಮಸ್ಯೆಗಳ ಬಗ್ಗೆ ಸುದ್ದಿಗಳು ಮಾಡುವ ಮೂಲಕ ಜನರ ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ ಎಂದು ಪತ್ರಕರ್ತರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಸದ ಸಾಗರ ಖಂಡ್ರೆ ಮಾತನಾಡಿ, ಪತ್ರಕರ್ತರ ವರದಿ ಜನರ ಸಂವೇದನೆಗಳೊಂದಿಗೆ ಇರುವುದರಿಂದ ಸಮಾಜದಲ್ಲಿನ ಸೂಕ್ಷ್ಮತೆಗಳ ಬಗ್ಗೆ ಒಳನೋಟವಿರುತ್ತದೆ. ಈ ಕಾರಣಕ್ಕಾಗಿ ಪತ್ರಕರ್ತರ ವರದಿ ಸಮಾಜದ ಕನ್ನಡಿಯಾಗಿದೆ ಎಂದರು.

ಸಮಾಜದಲ್ಲಿ ಪತ್ರಕರ್ತರ ಜವಾಬ್ದಾರಿ ತುಂಬ ದೊಡ್ಡದು. ಪತ್ರಕರ್ತರ ಲೇಖನಿಗೆ ಬಹುದೊಡ್ಡ ಹೊಣೆ ಇದೆ. ಅದನ್ನು ಎಚ್ಚರದಿಂದ ಬಳಸಬೇಕು ಎಂದರು.
ಯಾವುದೇ ಪಕ್ಷವಿರಲಿ ಎಲ್ಲರ ಬಗ್ಗೆ ಒಳ್ಳೆಯದು, ಕೆಟ್ಟದ್ದು ಹೊರಗೆ ತೆಗೆಯುವ ಕೆಲಸ ಪತ್ರಕರ್ತರು ಮಾಡುತ್ತಾರೆ. ಅಂತಹ ಪತ್ರಕರ್ತರಿಂದ ಸಮಾಜದಲ್ಲಿ ಪರಿವರ್ತನೆಯಾಗುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್ ವಹಿಸಿ ಮಾತನಾಡಿದರು. ಪತ್ರಕರ್ತ ಮನ್ಮಥ ಸ್ವಾಮಿ ಮಾತನಾಡಿದರು. ತಹಸೀಲ್ದಾರ ಮಲ್ಲಶೆಟ್ಟಿ ಚಿದ್ರೆ, ತಾಪಂ ಇಒ ಬಿರೇಂದ್ರಸಿಂಗ್ ಠಾಕೂರ್, ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಪತ್ರಕರ್ತರಾದ ಶರಣಪ್ಪ ಚಿಟಮೇ, ಚನ್ನಬಸವ ಮೊಕ್ತೆದಾರ್, ಸುನಿಲ ಜಿರೋಬೆ, ಅಮರೇಶ್ವರ ಚಿದ್ರೆ, ಅಮರ ಸ್ವಾಮಿ, ಸುಧೀರ್ ಪಾಂಡ್ರೆ, ಅಹ್ಮದ್, ರವಿಕುಮಾರ ಮಠಪತಿ, ರಾಚಯ್ಯ ಸ್ವಾಮಿ, ಸೂರ್ಯಕಾಂತ ಎಕಲಾರ, ಶಿವಕುಮಾರ ಸಾದುರೆ, ಅಲೀಂಪಾಶಾ, ಶಿವಾನಂದ ಬೇಂದ್ರೆ, ಅಂಬಾದಾಸ ಉಪ್ಪಾರ, ಅಂಬಾದಾಸ ನೆಳಗೆ, ರವಿಕುಮಾರ ಶಿಂಧೆ, ರವಿ ವಲ್ಲೇಪೂರೆ, ಲಕ್ಷ್ಮಣ ರಾಠೋಡ ಸೇರಿದಂತೆ ನಾನಾ ಇಲಾಖೆಯ ಅಧಿಕಾರಿಗಳು ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡರು.

ವಿಶ್ವನಾಥ ಬಿರಾದಾರ ಪತ್ರಕರ್ತರ ಕುರಿತು ಕವನ ಹೇಳಿದರು. ಬಸವೇಶ್ವರ ಡಿಇಡಿ ಕಾಲೇಜಿನ ವಿದ್ಯಾರ್ಥಿ ನೀಲಾಂಬಿಕಾ ಕುಂಬಾರ ಪ್ರಾರ್ಥನಾ ಗೀತೆ ಹಾಡಿದರು. ಪರಮೇಶ್ವರ ವಿಳಾಸಪೂರೆ ನಿರೂಪಿಸಿದರು. ರಿಯಾಜ್ ಪಾಶಾ ಸ್ವಾಗತಿಸಿ, ವಂದಿಸಿದರು. ಈ ವೇಳೆ ಹಿರಿಯ ಪತ್ರಕರ್ತ ಸುಭಾಷ ಬಣಗಾರ ಅವರಿಗೆ ಲೇಖನಿ ತಪಸ್ವಿ, ಹಿರಿಯ ಪತ್ರಕರ್ತ ಭವಾನಿಸಿಂಗ್ ಠಾಕೂರ ಅವರಿಗೆ ಚೇತನ ಶ್ರೀ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಇದಕ್ಕೂ ಮೊದಲು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಖಂಡ್ರೆಗೆ ಸತ್ಕಾರ ಸುರಿಮಳೆ:

ಸಂಸದ ಸಾಗರ ಖಂಡ್ರೆ ಅವರು ಸಂಸದರಾದ ಬಳಿಕ ಔರಾದ್ ತಾಲೂಕಿಗೆ ಪ್ರಥಮವಾಗಿ ಆಗಮಿಸಿದರಿಂದ ಕಾರ್ಯನಿರತ ಪತ್ರಕರ್ತರ ಸಂಘ ಸೇರಿದಂತೆ ನಾನಾ ಸಂಘಟನೆಯ ಕಾರ್ಯಕರ್ತರು, ಸಂಘ ಸಂಸ್ಥೆಯ ಅಧ್ಯಕ್ಷರು, ಮುಖಂಡರು ಸತ್ಕರಿಸಿದರು. ಈ ವೇಳೆ ಸತ್ಕಾರಕ್ಕೆ ತಾಲೂಕಿನ ಗ್ರಾಮೀಣ ಭಾಗದ ಜನರು ಆಗಮಿಸಿರುವುದು ಕಂಡು ಬಂತು.

ವರದಿ: ರವಿಕುಮಾರ ಶಿಂದೆ


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

 

ಇತ್ತೀಚಿನ ಸುದ್ದಿ

Exit mobile version